ಬಿಜೆಪಿಯವರಿಗೆ ಸರ್ಕಾರ ರಚಿಸುವ ಆಸೆ ಇರುವುದರಲ್ಲಿ ತಪ್ಪೇನು ಇಲ್ಲ, ಮಾಜಿ ಸಚಿವ ಸಿ.ಎಂ.ಇಬ್ರಾಹಿಂ

ಬೆಂಗಳೂರು, ಜ.1-ಸರ್ಕಾರ ರಚಿಸುವ ಬಗ್ಗೆ ಬಿಜೆಪಿಯವರು ಆಸೆ ಇಟ್ಟುಕೊಂಡಿರುವುದರಲ್ಲಿ ತಪ್ಪೇನಿಲ್ಲ. ಆದರೆ ಮದುವೆಯಾಗುವವರೆಗೂ ವಧುವಿನ ಹುಡುಕಾಟ ನಡೆಸಬೇಕು ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕ್ರಾಂತಿ ನಂತರ ರಾಜ್ಯದ ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಉಂಟಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಆಶಾವಾದಿಗಳಾಗಿದ್ದಾರೆ. ಮದುವೆಯಾಗುವ ವಧುವನ್ನು ಈಗಾಗಲೇ ತಾಳಿ ಕಟ್ಟಿ ಬೇರೆಯವರು ಕರೆದುಕೊಂಡು ಹೋಗಿದ್ದಾರೆ. ಈಗ ಅದೇ ವಧುವನ್ನು ಕಿಡ್ಯ್ನಾಪ್ ಮಾಡಿ ತರುತ್ತೇವೆ ಎಂದು ಹೇಳುವುದು ಸರಿಯಲ್ಲ, ಇದು ಒಳ್ಳೆಯ ಸಂಪ್ರದಾಯವೂ ಅಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ತಾಳಿ ಕಟ್ಟಿದ್ದಾರೆ. ಮೈತ್ರಿ ಸರ್ಕಾರವೂ ನಡೆಯುತ್ತಿದೆ. ಈಗ ಮತ್ತೆ ಕರೆದುಕೊಂಡು ಬರುತ್ತೇನೆ ಎಂದರೆ ಸರಿಯಲ್ಲ. ಆಹ್ವಾನ ನೀಡದೆ ಯಾವ ಶಾಸಕರೂ ಕೂಡ ರಾಜೀನಾಮೆ ನೀಡಿ ಬರುವುದಿಲ್ಲ. ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ತಮ್ಮ ಮಕ್ಕಳೆಂದು ಹೇಳುವುದು ತರವಲ್ಲ. ಈ ಹಿಂದೆ ಬಿಜೆಪಿಯವರು ಹೀಗೇ ಮಾಡಿದ್ದರು, ಮತ್ತೆ ಅದನ್ನು ಮಾಡಬೇಡಿ ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದರು.

ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಅವರು ಏಕೆ ಸಿಟ್ಟು ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಅವರನ್ನು ಸಂಪರ್ಕ ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಮತ್ತೆ ಚುನಾವಣೆ ಎದುರಿಸಬೇಕಾಗುತ್ತದೆ. ಇದರಿಂದ ಯಾರಿಗೆ ನಷ್ಟವಾಗುತ್ತದೆ ಎಂದು ಪ್ರಶ್ನಿಸಿದರು.

ಇಂಥದ್ದನ್ನು ಜನರು ಒಪ್ಪುವುದಿಲ್ಲ. ಒಬ್ಬರು, ಇಬ್ಬರು ಶಾಸಕರು ರಾಜೀನಾಮೆ ಕೊಟ್ಟು ಹೋದರೆ ಆಗುವುದಿಲ್ಲ. 18 ಮಂದಿ ಕೊಟ್ಟು ಹೋಗಬೇಕು. ಬಿಜೆಪಿಯವರು ಆಡಳಿತ ಪಕ್ಷದ ಶಾಸಕರನ್ನು ಸೆಳೆಯಲು ಯತ್ನಿಸಿದರೆ, ಇನ್ನೊಬ್ಬರು ಬಿಜೆಪಿ ಶಾಸಕರನ್ನು ಸೆಳೆಯುವ ಯತ್ನ ಮಾಡುತ್ತಾರೆ. ಹೀಗೆ ಬಿಜೆಪಿಯವರು 10 ಜನರನ್ನು ಸೆಳೆದರೆ, ಇನ್ನೊಬ್ಬರು 4 ಜನರನ್ನು ಸೆಳೆಯುತ್ತಾರೆ. ಮತ್ತೆ ಅದೇ ರೀತಿ ಸಮಸ್ಯೆ ಉಂಟಾಗುತ್ತದೆ. ಬೇಲಿ ಹಾರುವ ಬದಲು ನಿಮ್ಮ ಕಾಂಪೌಂಡ್ ಸರಿಪಡಿಸಿಕೊಳ್ಳಿ ಎಂದು ಬಿಜೆಪಿಯವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಇನ್ನೊಬ್ಬರ ಬೆಳೆಗೆ ಕೈ ಹಾಕುವುದನ್ನು ಜನ ಒಪ್ಪುವುದಿಲ್ಲ. ಜನರು ಬುದ್ಧಿವಂತರಿದ್ದಾರೆ. ಗೆದ್ದ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಸುಮ್ಮನೆ ಹೋಗ್ತಾರಾ? ಎಂದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಸುಗಮವಾಗಿ ನಡೆಯುತ್ತಿದೆ ಎಂದು ಹೇಳಿದರು.

ಮೈತ್ರಿ ಧರ್ಮವನ್ನು ಕಾಂಗ್ರೆಸ್ ಪಾಲಿಸುತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸಮನ್ವಯ ಸಮಿತಿಯ ತೀರ್ಮಾನದಂತೆ ಇದುವರೆಗೂ ನಡೆದುಕೊಂಡು ಬರಲಾಗಿದೆ ಏನಾದರೂ ಸಮಸ್ಯೆಯಿದ್ದರೆ ದೇವೇಗೌಡರು ಹಿರಿಯರಿದ್ದಾರೆ, ನಾಯಕರೊಂದಿಗೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬಹುದಲ್ಲವೇ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ