ಟ್ವೀಟರ್ನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸದಾನಂದಗೌಡ ಮತ್ತು ಸಿದ್ದರಾಮಯ್ಯ ನಡುವೆ ಗುದ್ದಾಟ

ಬೆಂಗಳೂರು,ಡಿ.31- ಶಾಸಕರ ಕುದುರೆ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿಗಳಾದ ಸದಾನಂದಗೌಡ ಮತ್ತು ಸಿದ್ದರಾಮಯ್ಯನವರ ನಡುವೆ ಟ್ವಿಟರ್‍ನಲ್ಲಿ ಮಾತಿನ ಗುದ್ದಾಟ ಜೋರಾಗಿದೆ.

ಕುದರೆ ಏರಲಾರದವನು ಧೀರನೂ ಅಲ್ಲ. ಶೂರನೂ ಅಲ್ಲ ಎಂದು ಸದಾನಂದಗೌಡ ಅವರ ವಾಗ್ದಳಿಗೆ ತಿರುಗೇಟು ನೀಡಿರುವ 11 ತಿಂಗಳಲ್ಲೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಓಡಿಹೋದ ನೀವು ನಿಮ್ಮ ಅನುಭವವನ್ನು ಸರಿಯಾಗಿ ಹೇಳಿದ್ದೀರಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ನಿನ್ನೆ ಸಿದ್ದರಾಮಯ್ಯನವರು , ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ 25ರಿಂದ 30 ಕೋಟಿ ರೂ. ನೀಡಿ ಖರೀದಿಸಲು ಮುಂದಾಗಿದೆ. ಅವರು ಭ್ರಷ್ಟಾಚಾರಿಗಳಲ್ಲದೇ ಇದ್ದರೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬರುತ್ತದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವೀಟ್‍ನಲ್ಲಿ ಬಿಜೆಪಿ ವಿರುದ್ಧ ಆರೋಪಿಸಿದ್ದರು.

ಇದಕ್ಕೆ ಟ್ವಿಟರ್‍ನಲ್ಲಿಯೇ ಪ್ರತಿ ದಾಳಿ ನಡೆಸಿರುವ ಸದಾನಂದಗೌಡರು,ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ರಾಜಕಾರಣದ ಬಗ್ಗೆ ಟೀಕೆ ಮಾಡಿದಾಗ ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಲಾಗದಷ್ಟು ಅಸಹನೆ ನಿಮಗೆ ಶುರುವಾಗಿದ್ದು ಯಾವಾಗ. ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಪರಿಣಾಮವೇ?ಅಥವಾ ಮುಖ್ಯಮಂತ್ರಿ ಕುರ್ಚಿ ಕಳೆದುಕೊಂಡ ಮನಸ್ಥಿತಿಯೇ?ಎಂದು ಪ್ರಶ್ನಿಸಿದ್ದರು.

ಕುದುರೆ ಏರಲಾರದವನು ಧೀರನೂ ಅಲ್ಲ. ಶೂರನೂ ಅಲ್ಲ. ನಿಮ್ಮ ಪಕ್ಷದ ಹುಳುಕು ಮುಚ್ಚಿಕೊಳ್ಳಲು ಇದೊಂದು ಹೊಸ ಪ್ರಹಸನ. ಮುಲಾಜಿನ ಸರ್ಕಾರ ನಡೆಸಲು ಮುಖ್ಯಮಂತ್ರಿಗಳಿಗೆ ಕೈ ಜೋಡಿಸಿದ್ದೀರಿ.ಕನ್ನಡಿಗರು ಮುಗ್ಧರು.ಮೂರ್ಖರಲ್ಲ ನಿಮ್ಮ ಗಿಲೂಟು ಮಾತು ನಂಬಲು- ಎಂದು ಸದಾನಂದ ಗೌಡ ಕಿಡಿಕಾರಿದರು.

ಅದಕ್ಕೆ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿರುವ ಸಿದ್ದರಾಮಯ್ಯನವರು ಸದಾನಂದಗೌಡ ಅವರೇ ನಿಮ್ಮ ಅನುಭವವನ್ನು ಸರಿಯಾಗಿ ಹೇಳಿದ್ದೀರಿ.ಕುದುರೆ ಏರಲಾರದವನು ಶೂರನೂ ಅಲ್ಲ, ಧೀರನೂ ಅಲ್ಲ. ಎಷ್ಟೆಂದರೂ 11 ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಓಡಿಹೋದವರಲ್ಲವೇ ನೀವು?ಎಂದು ಮರು ಟ್ವೀಟ್ ಮಾಡಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ , ಮಾನ್ಯ ಸಿದ್ದರಾಮಯ್ಯನವರೇ, ಯಾವ ಆಧಾರದಲ್ಲಿ ಭಾರತೀಯ ಜನತಾ ಪಾರ್ಟಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಹೇಳಿದ್ದೀರಿ? ನೀವೇ ಹೇಳಿ ನಿಮ್ಮ ಯಾವ ಶಾಸಕರು ಕುದುರೆ ವ್ಯಾಪಾರವಾಗಲು ತಯಾರಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ಸಿನಲ್ಲಿ ಹಿಡಿತ ಸಾಧಿಸಲು ಇಬ್ಬರು ಮಂತ್ರಿಗಳನ್ನು ಕೈಬಿಟ್ಟು ನಿಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೀರಿ.ಈಗ ಕಾಂಗ್ರೆಸ್ಸಿನ ಶಾಸಕರೇ ತಿರುಗಿ ಬಿದ್ದಿದ್ದಾರೆ.ಅದಕ್ಕೆ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.

ನಿಮ್ಮ ಪಕ್ಷದ ಶಾಸಕರನ್ನು ಸಮಾಧಾನಪಡಿಸಿ ಭಿನ್ನಮತ ಶಮನಗೊಳಿಸುವ ಹೊಣೆ ನಿಮ್ಮದು. ಅದನ್ನು ಬಿಟ್ಟು ವೃಥಾ ಬಿಜೆಪಿ ಬಗ್ಗೆ ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದ್ದೀರಿ ಎಂದು ಟೀಕಿಸಿದ್ದಾರೆ.

ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಿಜೆಪಿಯನ್ನು ಅಪರಾಧ ಜಾಗದಲ್ಲಿ ನಿಲ್ಲಿಸುವುದು ಸರಿಯಲ್ಲ. ಮೊದಲು ನಿಮ್ಮ ಪಕ್ಷದಲ್ಲಿರುವ ಭಿನ್ನಾಭಿಪ್ರಾಯಗಳು, ಒಡಕುಗಳನ್ನು ಸರಿಪಡಿಸಿಕೊಳ್ಳಿ ಎಂದು ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ಪ್ರಾಬಲ್ಯ ಸಾಧಿಸಲು ತಮ್ಮ ಕಡೆಯವರಿಗೇ ಸಚಿವ ಸ್ಥಾನ ಸಿಗುವಂತೆ ನೋಡಿಕೊಂಡಿದ್ದೀರಿ. ಭಿನ್ನಾಭಿಪ್ರಾಯವನ್ನು ನಿಯಂತ್ರಿಸಲು ವಿಫಲವಾದ ನಂತರ, ಈಗ ದುರುದ್ದೇಶಪೂರಿತ ಬ್ಲೇಮ್-ಗೇಮ್‍ನಲ್ಲಿ ತೊಡಗಿಸಿಕೊಂಡಿದ್ದೀರಾ ಎಂದು ವ್ಯಂಗ್ಯವಾಡಿದ್ದಾರೆ.

ನಿಮ್ಮ ಗ್ಲೇಮ್ ಪ್ಲಾನ್‍ನಿಂದ ಆಗಿರುವುದಾದರೂ ಏನು. ನಿಮ್ಮ ಗ್ಲೇಮ್ ಪ್ಲಾನ್‍ನಿಂದ ಉಂಟಾಗಿರುವ ಬಿರುಕು ಮತ್ತಷ್ಟು ಹೆಚ್ಚಾಗಲಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ