ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸಿದ್ದತೆ ಪ್ರಾರಂಭ

ಬೆಂಗಳೂರು,ಡಿ.31-ಬರಲಿರುವ ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ದತೆಯನ್ನು ಪ್ರಾರಂಭಿಸಿರುವ ಬಿಜೆಪಿ ಇಂದು ಐದು ಕ್ಷೇತ್ರಗಳ ಮುಖಂಡರ ಜೊತೆ ಮಹತ್ವದ ಸಭೆ ನಡೆಸಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ತುಮಕೂರು ಚಿತ್ರದುರ್ಗ, ಚಾಮರಾಜನಗರ, ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಮುಖಂಡರು ಭಾಗವಹಿಸಿದ್ದರು.

ಒಂದೊಂದು ಲೋಕಸಭಾ ಕ್ಷೇತ್ರಗಳಿಗೆ ಆಕಾಂಕ್ಷಿಗಳು ಹೆಚ್ಚಿರುವುದರಿಂದ ಸರ್ವಸಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಖಂಡರ ಸಭೆಯನ್ನು ಕರೆಯಲಾಗಿತ್ತು.

ಮೂರು ದಿನಗಳ ಹಿಂದೆಯೇ ಸಭೆ ನಡೆಯಬೇಕಾಗಿತ್ತಾದರೂ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ನಿಮಿತ್ತ ದೆಹಲಿಗೆ ತೆರಳಿದ್ದರಿಂದ ಮುಂದೂಡಲಾಗಿತ್ತು.

ಇಂದು ನಡೆದ ಸಭೆಯಲ್ಲಿ ಪ್ರಮುಖವಾಗಿ ಯಾರೇ ಅಭ್ಯರ್ಥಿಯಾದರೂ ಗೆಲುವಿಗೆ ಎಲ್ಲರೂ ಶ್ರಮಿಸಬೇಕು.ಟಿಕೆಟ್ ವಂಚಿತರು ಮುನಿಸಿಕೊಳ್ಳದೆ ಪಕ್ಷಕ್ಕೆ ದುಡಿಯಬೇಕೆಂಬ ಸಲಹೆಯನ್ನು ಯಡಿಯೂರಪ್ಪ ನೀಡಿದರು.

ಒಂದೊಂದು ಕ್ಷೇತ್ರವೂ ಅತ್ಯಂತ ಪ್ರಮುಖವಾಗಿರುವುದರಿಂದ ಟಿಕೆಟ್ ವಂಚಿತರು ಅಭ್ಯರ್ಥಿ ಪರ ಕೆಲಸ ಮಾಡದಿರುವುದು, ಪಕ್ಷ ಬಿಡುವುದು, ಇಲ್ಲವೇ ಎದುರಾಳಿ ಅಭ್ಯರ್ಥಿಗಳ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವ ಕೆಲಸವನ್ನು ಯಾರೊಬ್ಬರೂ ಮಾಡಬಾರದೆಂದು ಸೂಚಿಸಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಬರಬೇಕಾದರೆ ನಾವೆಲ್ಲರೂ ನಮ್ಮ ನಮ್ಮ ಸ್ವಾರ್ಥವನ್ನು ಬದಿಗಿಟ್ಟು ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಬೇಕು. ನಮಗೆ ಮುಂದಿನ ಲೋಕಸಭೆ ಚುನಾವಣೆಯು ಅತ್ಯಂತ ಪ್ರತಿಷ್ಠೆಯಾಗಿದೆ.

2014ರ ಚುನಾವಣೆಗೂ, ಈಗಿನ ಚುನಾವಣೆಗೂ ಸಾಕಷ್ಟು ವ್ಯತ್ಯಾಸಗಳಾಗಿವೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳು, ಮಹಾಘಟ್‍ಬಂಧನ್ ರಚನೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕರ್ನಾಟಕದಲ್ಲೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ.

ಈವರೆಗೂ ನಮಗೆ ಚುನಾವಣೆಯಲ್ಲಿ ಎರಡು ಪಕ್ಷಗಳು ಎದುರಾಳಿಯಾಗುತ್ತಿದ್ದವು.ಈಗ ಈ ಪಕ್ಷಗಳು ಒಂದಾಗಿರುವುದರಿಂದ ಕಠಿಣ ಸವಾಲು ಎದುರಾಗಿದೆ.ಇದನ್ನು ಹಿಮ್ಮೆಟ್ಟಿಸಿ ಹೆಚ್ಚು ಸ್ಥಾನ ಗಳಿಸಬೇಕು.ಅಭ್ಯರ್ಥಿಗಳು ಯಾರೇ ಆದರೂ ಗೆಲ್ಲಲು ಕೈ ಜೋಡಿಸಬೇಕೆಂದು ಸೂಚನೆ ಕೊಟ್ಟರು.

ತುಮಕೂರಿನಿಂದ ಮಾಜಿ ಸಂಸದ ಜಿ.ಎಚ್.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ ಹೆಸರುಗಳು ಕೇಳಿಬಂದಿವೆ. ಚಾಮರಾಜನಗರದಲ್ಲಿ ಮಾಜಿ ಸಚಿವ ಎಂ.ಶಿವಣ್ಣ, ವಿ.ಶ್ರೀನಿವಾಸ್ ಪ್ರಸಾದ್, ಚಿತ್ರದುರ್ಗದಿಂದ ಜನಾರ್ಧನ ಸ್ವಾಮಿ, ಮಂಡ್ಯದಲ್ಲಿ ಸಿದ್ದರಾಮಯ್ಯ, ಹಾಸನದಿಂದ ಶಾಸಕ ಪ್ರೀತಂಗೌಡ, ಸಿ.ಟಿ.ರವಿ ಸೇರಿದಂತೆ ಮತ್ತಿತರ ಹೆಸರುಗಳು ಚಾಲ್ತಿಯಲ್ಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ