ಹಿರಿಯ ನಟ ಲೋಕನಾಥ್ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು,ಡಿ.31- ಹಿರಿಯ ನಟ ಲೋಕನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದ ನಟ ಲೋಕನಾಥ್ ಅವರು ಭೂತಯ್ಯನ ಮಗ ಅಯ್ಯು ಚಿತ್ರದ ಪಾತ್ರ ಜನಮನದಲ್ಲಿ ಸದಾ ಹಸಿರಾಗಿ ಉಳಿದಿದೆ.ಚಿತ್ರರಂಗ, ರಂಗಭೂಮಿ ಎರಡೂ ಕ್ಷೇತ್ರದಲ್ಲಿ ಅವರ ಕೊಡುಗೆ ಸ್ಮರಣೀಯ ಎಂದಿರುವ ಮುಖ್ಯಮಂತ್ರಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ರಂಗಭೂಮಿ ಹಾಗೂ ಚಲನಚಿತ್ರರಂಗ ಹಿರಿಯ ನಟ ಲೋಕನಾಥ್ ಅವರ ನಿಧನದ ಸುದ್ದಿ ತಿಳಿದು ತಮಗೆ ಅತೀವ ದುಃಖವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಡಾ.ಜಯಮಾಲ ತಿಳಿಸಿದ್ದಾರೆ.

ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಕ್ಕೆ ಲೋಕನಾಥ್ ಅವರ ಕೊಡುಗೆ ಅಪಾರವಾಗಿದ್ದು, ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ.ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಕನ್ನಡದ ಹಿರಿಯ ನಟ ಲೋಕನಾಥ್ ನಿಧನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಕೂಡ ಶೋಕ ವ್ಯಕ್ತಪಡಿಸಿದ್ದು, ಒಂದು ಸಾವಿರ ನಾಟಕಗಳು, 650ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಲೋಕನಾಥ್ ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರಲ್ಲಿ ಒಬ್ಬರು. ನಟರಂಗದ ಮೂಲಕ ರಂಗಭೂಮಿ ಪ್ರವೇಶಿಸಿದ ಅವರು ಅಂದಿನಿಂದಲೂ ನಿರಂತರವಾಗಿ ಅಭಿನಯಿಸುತ್ತ ಬಂದವರು ಎಂದು ಸ್ಮರಿಸಿದರು.

ಭೂತಯ್ಯನ ಮಗ ಅಯ್ಯು, ಮಿಂಚಿನ ಓಟ ಚಿತ್ರಗಳು ಜನರ ಮನಸ್ಸಿನಲ್ಲಿ ಸದಾ ಹಸಿರಾಗಿವೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಸನ್ಮಾನಗಳಿಗೆ ಭಾಜನರಾಗಿದ್ದ ಅವರ ನಿಧನದಿಂದ ಕನ್ನಡ ಚಿತ್ರರಂಗ ಅಭಿಜಾತ ಕಲಾವಿದರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ