ಮಂಗಳೂರು,ಡಿ.30- ದಕ್ಷ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆ. ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಧುಕರ ಶೆಟ್ಟಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪೊಲೀಸರು ಮತ್ತು ಜನರ ಬೇಡಿಕೆಗಳಿಗೆ ಬೆಲೆ ಕೊಡುತ್ತೇವೆ. ಮಧುಕರ ಶೆಟ್ಟಿಯವರ ಹೆಸರನ್ನು ಪೊಲೀಸ್ ತರಬೇತಿ ಶಾಲೆ ಮತ್ತು ಸೈನಿಕ ಶಾಲೆಗೆ ಇಡುವ ಬಗ್ಗೆಯೂ ಕೂಡ ಚಿಂತನೆ ನಡೆಸಿದ್ದೇವೆ.
ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಮಧುಕರ ಶೆಟ್ಟಿಯವರು ಇಲಾಖೆ ಮತ್ತು ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.