ಕುದುರೆ ವ್ಯಾಪಾರದ ಮೂಲಕ ಶಾಸಕರ ಖರೀದಿಗೆ ಮುಂದಾಗಿರುವ ಬಿಜೆಪಿ ಎಂದು ಆರೋಪ ಮಾಡಿದ ಮಾಜಿ ಸಿ.ಎಂ.ಸಿದ್ದರಾಮಯ್ಯ

ಮೈಸೂರು, ಡಿ.30- ಕುದುರೆ ವ್ಯಾಪಾರದ ಮೂಲಕ ಶಾಸಕರ ಖರೀದಿಗೆ ಬಿಜೆಪಿ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ದುರಾಸೆಯಿಂದ ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ.ಇದಕ್ಕಾಗಿ ಕುದುರೆ ವ್ಯಾಪಾರದ ಮೂಲಕ ಶಾಸಕರ ಖರೀದಿಗೆ ಮುಂದಾಗಿದೆ ಎಂದು ದೂರಿದರು.

25 ರಿಂದ 30 ಕೋಟಿ ರೂ. ಹಣ ಆಫರ್ ಮಾಡಿ ಶಾಸಕರ ಖರೀದಿ ಮಾಡಲು ಮುಂದಾಗಿದೆ. ಈ ಹಣ ಎಲ್ಲಿಂದ ಬರುತ್ತದೆ, ಇದು ಭ್ರಷ್ಟಾಚಾರದ ಹಣ ಅಲ್ಲವೆ ಎಂದು ಪ್ರಶ್ನಿಸಿದರು.

104 ಸ್ಥಾನಗಳನ್ನಿಟ್ಟುಕೊಂಡು ನಾವು ಅಧಿಕಾರಕ್ಕೆ ಬರಬೇಕೆಂದರೆ ಹೇಗೆ ಸಾಧ್ಯ?ಪ್ರಜಾಪ್ರಭುತ್ವದಲ್ಲಿ ಬಹುಮತ ಇದ್ದರಷ್ಟೇ ಅಧಿಕಾರಕ್ಕೆ ಬರಲು ಸಾಧ್ಯ ಎಂಬ ಪರಿಜ್ಞಾನ ಇರಬೇಕು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಬಿಜೆಪಿಯವರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅವರ ಪಕ್ಷಕ್ಕೆ ಯಾವ ಶಾಸಕರೂ ಹೋಗುವುದಿಲ್ಲ. ಶಾಸಕರನ್ನು ಖರೀದಿ ಮಾಡುವಂತಹ ಅವರ ಪ್ರಯತ್ನ ಫಲ ನೀಡುವುದಿಲ್ಲ ಎಂದರು.

ಶೀಘ್ರದಲ್ಲೇ ಜೆಡಿಎಸ್-ಕಾಂಗ್ರೆಸ್‍ನಿಂದ ನಿಗಮ ಮಂಡಳಿಗಳ ಅಧ್ಯಕ್ಷರುಗಳ ನೇಮಕಾತಿ ಆಗಲಿದೆ. ನೇಮಕಾತಿ ಬಗ್ಗೆ ಅಂತಿಮ ರೂಪುರೇಷೆಗಳನ್ನು ಕೆಲವೇ ದಿನಗಳಲ್ಲಿ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಈಗಾಗಲೇ ಕಾಂಗ್ರೆಸ್‍ನಿಂದ 20 ಮಂದಿ ಹೆಸರುಗಳನ್ನು ಪಕ್ಷದ ವರಿಷ್ಠರಿಗೆ ನೀಡಲಾಗಿದೆ.ಒಟ್ಟಾಗಿಯೇ 30 ಮಂದಿ ನೇಮಕಾತಿಯನ್ನು ಮಾಡಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ನವದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂಬ ಬಗ್ಗೆ ನಿಮಗೆ ಗೊತ್ತ?ಅವರೇನಾದರೂ ನಿಮಗೆ ಹೇಳಿದ್ದರ ಎಂದು ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದರು.

ರಮೇಶ್ ಅವರು ನನ್ನ ಸಂಪರ್ಕಕ್ಕೂ ಸಿಕ್ಕಿಲ್ಲ, ಅವರು ದೆಹಲಿಯಲ್ಲಿದ್ದಾರೋ, ಮುಂಬೈನಲ್ಲಿದ್ದಾರೋ ಗೊತ್ತಿಲ್ಲ. ಅಲ್ಲಿದ್ದಾರೆ, ಇಲ್ಲಿದ್ದಾರೆ ಎಂಬ ಅಂತೆ ಕಂತೆಗಳಿಗೆಲ್ಲ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಿಮಗೇನಾದರೂ ಗೊತ್ತಾ ಎಂದು ಮರುಪ್ರಶ್ನೆ ಹಾಕಿದರು.

ಉಪಮುಖ್ಯಮಂತ್ರಿ ಪರಮೇಶ್ವರ್ ಬಳಿ ಇದ್ದ ಗೃಹ ಖಾತೆಯನ್ನು ಬೇರೆಯವರಿಗೆ ನೀಡಿ ದಲಿತರಿಗೆ ಅನ್ಯಾಯ ಮಾಡಲಾಗಿದೆ ಎಂದು ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದಕ್ಕೆ ಈಗಾಗಲೇ ದೇಶಪಾಂಡೆ ಅವರು ಉತ್ತರ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರ ಇಂಗ್ಲಿಷ್ ಭಾಷಾ ಶಾಲೆಗಳನ್ನು ತೆರೆಯುವುದರ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲಿದ್ದೇನೆ ಎಂದು ಹೇಳಿ ಇಂಗ್ಲಿಷ್ ಭಾಷಾ ಶಾಲೆಗಳನ್ನು ತೆರೆಯುವ ಬಗ್ಗೆ ವಿರೋಧ ವ್ಯಕ್ತವಾಗಿದೆ. ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡುವ ದೃಷ್ಟಿಯಿಂದ ಸಾಹಿತ್ಯ ವಲಯದ ದಿಗ್ಗಜರು ಕೂಡ ಇಂಗ್ಲಿಷ್ ಶಾಲೆ ತೆರೆಯಲು ವಿರೋಧಿಸಿದ್ದಾರೆ. ಹಾಗಾಗಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ