ಡಿವೈಡರ್ ಗೆ ಡಿಕ್ಕಿ ಹೊಡೆದ ಐ-20 ಕಾರು ನಂತರ ಹಾರಿ ಐ10 ಕಾರಿನ ಮೇಲೆ ಬಿದ್ದ ಪರಿಣಾಮ, ಸ್ಥಳದಲ್ಲೇ ಮೃತಪಟ್ಟ 6 ಜನರು

ಗದಗ,ಡಿ.30- ಮದುವೆ ಮುಗಿಸಿ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ಐ-10 ಕಾರಿನ ಮೇಲೆ ಎದುರಿನಿಂದ ವೇಗವಾಗಿ ಬರುತ್ತಿದ್ದ ಐ-20 ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದು ಹಾರಿ ಬಿದ್ದ ಪರಿಣಾಮ ಐ-10 ಕಾರಿನಲ್ಲಿದ್ದ 6 ಮಂದಿ ಸಾವನ್ನಪ್ಪಿರುವ ಭೀಕರ ಘಟನೆ ಕೊಪ್ಪಳ ರಸ್ತೆಯ ಅಡವಿ ಸೋಮಾಪುರದ ಬಳಿ ಸಂಭವಿಸಿದೆ.
ಧಾರವಾಡದ ಹೆಬ್ಬಳ್ಳಿಯ ಅಗಸಿ ನಿವಾಸಿಗಳಾದ ಆನಂದ ಬೆಟಗೇರಿ, ಸಿದ್ದು ಕೋರಿಶೆಟ್ಟಿ, ಮನೋಜ್ ಕುಮಾರ ಕರಡಿಗುಡ್ಡ, ಅಮೃತ ಮತ್ತು ಚನ್ನುವಾಡದ್ ಮೃತ ದುರ್ದೈವಿಗಳು.

ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರೆಲ್ಲರೂ ಮದುವೆ ಮುಗಿಸಿ ಸ್ವಗ್ರಾಮಕ್ಕೆ ಐ-10 ಕಾರಿನಲ್ಲಿ ವಾಪಸ್ಸಾಗುತ್ತಿದ್ದರು.ಈ ವೇಳೆ ಎದುರಿನಿಂದ ವೇಗವಾಗಿ ಬರುತ್ತಿದ್ದ ಐ-20ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದು, ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಐ-10 ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಐ-10 ಕಾರು ಅಪ್ಪಚ್ಚಿಯಾಗಿದ್ದು, ಸ್ಥಳದಲ್ಲೇ 6 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಇನ್ನು ಐ-20 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಂಜುನಾಥ ಹಳ್ಳಿಕೇರಿ, ವಿರುಪಾಕ್ಷಪ್ಪ ಅಬ್ಬಿಗೇರಿ, ವಿಜಯಕುಮಾರ ಬನವಾಸಿ, ವಿಶ್ವನಾಥ ಕೆರೂರ ಎಂಬುವರಿಗೂ ಗಂಭೀರ ಗಾಯಗಳಾಗಿದ್ದು, ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಡಿವೈಎಸ್‍ಪಿ ವಿಜಯ್‍ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗದಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪ್ಪಚ್ಚಿಯಾದ ಕಾರಿನಿಂದ ಮೃತ ದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರ ಸಾಹಸ ನಡೆಸಿದರು.

ಸಂಚಾರ ಅಸ್ತವ್ಯಸ್ಥ:
ಭೀಕರ ಅಪಘಾತದ ಪರಿಣಾಮ ಕೆಲ ಕಾಲ ಸ್ಥಳದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿ, ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತು.

ಕುಟುಂಬದವರ ಆಕ್ರಂದನ:
6 ಮಂದಿ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ