ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರೆವೇರಿದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ

ಮಂಗಳೂರು,ಡಿ.30- ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಹೈದರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದ ದಕ್ಷ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಅಂತ್ಯ ಸಂಸ್ಕಾರ ಕುಂದಾಪುರ ಸಮೀಪದ ಅವರ ಸ್ವಗ್ರಾಮ ಯಡಾಡಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಇಂದು ನೆರವೇರಿತು.

ಮಧುಕರ ಶೆಟ್ಟಿಯವರ ಪಾರ್ಥೀವ ಶರೀರವನ್ನು ನಿನ್ನೆ ರಾತ್ರಿ ಬೆಂಗಳೂರಿನಿಂದ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಉಪ ಪೊಲೀಸ್ ಆಯುಕ್ತರಾದ ಚಂದ್ರಶೇಖರ್, ಉಮಾ ಪ್ರಶಾಂತ್ ಸೇರಿದಂತೆ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.

ಅಲ್ಲಿಂದ ರಸ್ತೆ ಮಾರ್ಗವಾಗಿ ಕುಂದಾಪುರದ ಯಡಾಡಿಗೆ ಕರೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮಸ್ಥರು, ಬಂಧುಗಳು, ಸ್ನೇಹಿತರು, ಸಹೋದ್ಯೋಗಿಗಳು ಅಂತಿಮ ದರ್ಶನ ಪಡೆದರು.

ನಂತರ ಯಡಾಡಿಯಲ್ಲಿ ಅಂತಿಮ ವಿಧಿ ವಿಧಾನವನ್ನು ಮಧುಕರ ಶೆಟ್ಟಿ ಸಹೋದರ ಮುರುಳಿಶೆಟ್ಟಿ ನೆರವೇರಿಸಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.ಇದೇ ಸಂದರ್ಭದಲ್ಲಿ ಮೃತರ ಗೌರವಾರ್ಥ ಮೂರು ಸುತ್ತು ಕುಶಾಲ ತೋಪು ಹಾರಿಸಲಾಯಿತು.

ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಹಾಗೂ ಸ್ನೇಹಿತರು, ಬಂಧುಗಳು, ಹಿತೈಷಿಗಳು ಭಾಗವಹಿಸಿದ್ದರು.

ನೀರವ ಮೌನ:
ದಕ್ಷ ಅಧಿಕಾರಿ ಮಧುಕರ ಶೆಟ್ಟಿಯವರ ನಿಧನದ ಹಿನ್ನೆಲೆ ಅವರ ಸ್ವಗ್ರಾಮ ಯಡಾಡಿಯಲ್ಲಿ ನೀರವ ಮೌನ ಆವರಿಸಿತ್ತು. ಇಡೀ ಗ್ರಾಮದಲ್ಲಿ ಸೂಚಕ ಛಾಯೆ ಎದ್ದು ಕಾಣುತ್ತಿತ್ತು.ತಮ್ಮ ಊರಿನ ಮನೆ ಮಗನನ್ನು ಕಳೆದುಕೊಂಡ ಗ್ರಾಮಸ್ಥರು ಕಂಬನಿ ಮಿಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ