ಸಿಎಜಿ ವರದಿಯಿಂದ ಬಯಲಾದ ಬಿಬಿಎಂಪಿಯ ಬೃಹತ್ ಭ್ರಷ್ಟಾಚಾರ

ಬೆಂಗಳೂರು, ಡಿ.28- ಅಬ್ಬಬ್ಬಾ ಇದೊಂದು ಖತರ್ನಾಕ್ ಐಡಿಯಾ… ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಬೃಹತ್ ಭ್ರಷ್ಟಾಚಾರವೊಂದು ಸಿಎಜಿ ವರದಿಯಿಂದ ಬಯಲಾಗಿದೆ.

ಬೊಮ್ಮನಹಳ್ಳಿ ವಲಯದಲ್ಲಿ ಆರೋಗ್ಯಾಧಿಕಾರಿಯಾಗಿದ್ದ ಸುರೇಶ್ ಎಂಬ ಮಹಾಶಯ ಎಸಗಿರುವ 3.75 ಕೋಟಿ ಅಕ್ರಮ ಬಯಲಾಗಿದೆ. ಈ ಮಹಾನುಭಾವ ಮಾಡಿರುವ ಕೃತ್ಯವಾದರೂ ಏನೆಂದು ಗಮನಿಸಿದರೆ ಎಲ್ಲರೂ ಶಾಕ್ ಆಗುತ್ತಾರೆ..!

ಸಾಮಾನ್ಯವಾಗಿ ಬಿಬಿಎಂಪಿ, ಟ್ರೇಡ್ ಲೈಸೆನ್ಸ್ ನೀಡಲು ಆಯಾ ಟ್ರೇಡ್‍ಗೆ ತಕ್ಕಂತೆ ಟ್ರೇಡ್‍ದಾರರಿಂದ ಡಿಡಿ ಪಡೆಯುತ್ತದೆ. ಆದರೆ, ಪಡೆದ ಒಂದೇ ಡಿಡಿಯನ್ನು ಕಲ್ಲರ್ ಜೆರಾಕ್ಸ್ ತೆಗೆದು ಸುಮಾರು 40 ರಿಂದ 50 ಜನರಿಗೆ ಟ್ರೇಡ್ ಲೈಸೆನ್ಸ್ ನೀಡಲಾಗಿದೆ. ದಾಖಲಾತಿಯಲ್ಲಿ ಡಿಡಿ ಇದೆ. ಅರ್ಜಿ ಸಲ್ಲಿಸಿದವರಿಗೆ ಲೈಸೆನ್ಸ್ ನೀಡಲಾಗಿದೆ. ಆದರೆ, ಕೂಲಂಕಶ ಪರಿಶೀಲನೆ ನಡೆಸಿದರೆ ಆ ಡಿಡಿ ಕಲರ್ ಜೆರಾಕ್ಸ್..! ಇದು ಅಧಿಕಾರಿಗಳ ಹಗಲು ದರೋಡೆ.

ಬೊಮ್ಮನಹಳ್ಳಿ ವಲಯ ಹೆಲ್ತ್ ಆಫೀಸರ್‍ನ ಈ ವಂಚನೆ ಮಹಾಲೆಕ್ಕಪರಿಶೋಧಕರ ವರದಿಯಲ್ಲಿ ಪತ್ತೆಯಾಗಿದೆ.ಪಾಲಿಕೆಗೆ ಬರುವ ಆದಾಯಕ್ಕೆ ಇದರಿಂದ ಧಕ್ಕೆಯಾಗಿದೆ.ಪ್ರಸ್ತುತ ಇರುವ ಆರೋಗ್ಯಾಧಿಕಾರಿ ಸರಿತಾ ಅವರು ನನಗೂ ಇದಕ್ಕೂ ಸಂಬಂಧವಿಲ್ಲ. ಹಿಂದೆ ಇದ್ದ ಸುರೇಶ್ ಅವರು ಮಾಡಿರುವ ಕೆಲಸ ಎಂದು ಹೇಳಿದ್ದಾರೆ.

ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಈ ಕುರಿತು ಮಾತನಾಡಿ, ಇದು ಬೊಮ್ಮನಹಳ್ಳಿ ವಲಯಕ್ಕೆ ಸೀಮಿತವಾಗಿಲ್ಲ, ಎಲ್ಲ ವಲಯದಲ್ಲೂ ನಡೆದಿರುವ ಶಂಕೆ ಇದೆ.ಬಿಬಿಎಂಪಿ ಆರ್ಥಿಕವಾಗಿ ಸಾಕಷ್ಟು ದಿವಾಳಿಯಾಗಿದೆ.ಇಷ್ಟೆಲ್ಲ ಆದರೂ ಮೇಯರ್ ಗಂಗಾಂಬಿಕೆ ಹಾಗೂ ಮೈತ್ರಿ ಪಕ್ಷ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಪಾಲಿಕೆಗೆ ಆಗುತ್ತಿರುವ ಆದಾಯ ಸೋರಿಕೆಯನ್ನು ತಡೆಗಟ್ಟಬೇಕು. 3.75 ಕೋಟಿ ಹಣವನ್ನು ವಸೂಲಿ ಮಾಡಬೇಕು. ಬಿಬಿಎಂಪಿಯಲ್ಲಿ 2682 ಕಡತಗಳು ಕಣ್ಮರೆಯಾಗಿವೆ. ಇದೆಲ್ಲದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ