ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಶೀಘ್ರವೇ ವರದಿ ಸಲ್ಲಿಸುವಂತೆ ಸೂಚಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಮುನಿರಾಜು

ಬೆಂಗಳೂರು, ಡಿ.28-ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ಕೂಡಲೇ ಪರಿಶೀಲಿಸಿ ಶೀಘ್ರವೇ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಮುನಿರಾಜು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೀಪದ ಸುತ್ತಲೂ ಕತ್ತಲೆ ಎಂಬಂತೆ ರಾಜ್ಯದ ರಾಜಧಾನಿಯನ್ನೇ ತನ್ನ ಜಿಲ್ಲಾ ಕೇಂದ್ರವನ್ನಾಗಿಸಿ ಕೊಂಡಿರುವ ಬೆಂಗಳೂರು ನಗರ ಜಿಲ್ಲೆ, ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ, ಎದುರಿಸುತ್ತಿರುವ ಸಮಸ್ಯೆಗಳತ್ತ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಬೇಧ ಮರೆತು ಬೆಳಕು ಚೆಲ್ಲುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮುನಿರಾಜು ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ಶಾಲೆಗೂ ಭೇಟಿ ನೀಡಿ ಖುದ್ಧು ಪರಿಶೀಲಿಸಿ, ಅಲ್ಲಿನ ಅವಶ್ಯಕತೆ ಮತ್ತು ಬೇಡಿಕೆಗಳನ್ನು ಪಟ್ಟಿ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಾಕೀತು ಮಾಡಿದರು.

ಶಾಲಾ ಜಮೀನು ಒತ್ತುವರಿಯಾಗದಂತೆ ಎಚ್ಚರವಹಿಸುವುದು, ಒತ್ತುವರಿಯಾದ ಪ್ರಕರಣಗಳು ಕಂಡು ಬಂದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ನೆರವಿನೊಂದಿಗೆ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಸ್ವತ್ತನ್ನು ರಕ್ಷಿಸುವುದು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಲ್ಲವೇ?ಎಂದು ಅವರು ಅಧಿಕಾರಿಗಳಿಗೆ ಪ್ರಶ್ನಿಸಿದರು.

ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ ಖಾಸಗಿ ಶಾಲೆಯೊಂದರ ಅಕ್ರಮಗಳನ್ನು ತನಿಖೆ ಮಾಡಿ ಎಂದು ದೂರು ಕೊಟ್ಟರೆ ಅಲ್ಲಿನ ಅಧಿಕಾರಿ ಶಾಲೆಯವರನ್ನೇ ತಮ್ಮ ಮನೆಗೆ ಕಳುಹಿಸದರು ಎಂದು ಸದಸ್ಯರೊಬ್ಬರು ಸಭೆಯ ಗಮನಕ್ಕೆ ತಂದಾಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಧ್ಯಕ್ಷರು ಇಂತಹ ಪ್ರಕರಣಗಳು ಎಂದೂ ಎಲ್ಲೂ ಮರುಕಳಿಸಬಾರದು ಎಂದು ಎಚ್ಚರಿಸಿದರು.

ಜಿಲ್ಲೆಯ ಎಲ್ಲಾ ಶಾಲಾ ವಿಳಾಸ-ವಿವರಗಳನ್ನು ಸೋಮವಾರದೊಳಗೆ ಎಲ್ಲಾ ಸದಸ್ಯರಿಗೆ ದೊರಕಿಸಿಕೊಡುವುಗಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಅರ್ಚನಾ ಸಭೆಗೆ ಭರವಸೆ ನೀಡಿದರು.

ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯಗಳು ಉತ್ತಮಗೊಳ್ಳುತ್ತದೆ ಎಂಬ ಕೆಲವು ಸದಸ್ಯರ ಅಭಿಪ್ರಾಯಕ್ಕೆ ಸ್ಪಂದಿಸಿದ ಅಧ್ಯಕ್ಷರು ಈ ವಿಷಯದತ್ತ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಜಿ.ಪಂ. ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಸದಸ್ಯೆ ಮಹಾಲಕ್ಷ್ಮೀ ಜಯರಾಂ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ. ಎಸ್. ಅರ್ಚನಾ, ಜಿಲ್ಲಾ ಪಂಚಾಯತ್ ಸದಸ್ಯರು, ತಾಲ್ಲೂಕು ಪಂಚಾಯತ್ ಸದಸ್ಯರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ