ಗೃಹ ಸಚಿವ ಸ್ಥಾನವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದ ಪರಮೇಶ್ವರ್ ಅವರಿಂದ ಈ ಖಾತೆಯನ್ನು ತೆಗೆಯಬಾರದಿತ್ತು, ಸಚಿವ ರೇವಣ್ಣ

ಬೆಂಗಳೂರು, ಡಿ.28- ಗೃಹ ಸಚಿವ ಸ್ಥಾನವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದ ಪರಮೇಶ್ವರ್ ಅವರಿಂದ ಈ ಖಾತೆಯನ್ನು ತೆಗೆಯಬಾರದಿತ್ತು. ಉಪಮುಖ್ಯಮಂತ್ರಿಯಾದ ಪರಮೇಶ್ವರ್ ಅವರನ್ನು ಅವರ ಪಕ್ಷದವರೇ ಸಹಿಸುತ್ತಿಲ್ಲ ಎಂದರೆ ನಾವೇನು ಮಾಡುವುದಕ್ಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಷ್ಟು ದಿನ ತಡೆಯಲು ಸಾಧ್ಯವೋ ಅಷ್ಟು ದಿನ ತಡೆಯುತ್ತಾರೆ.ಅಷ್ಟಕ್ಕೂ ಮೀರಿ ತಡೆಯುವುದಿಲ್ಲ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಆಶ್ಚರ್ಯ ಮೂಡಿಸಿದರು.

ಪರಿಶಿಷ್ಟ ಜಾತಿಯವರಾದ ಪರಮೇಶ್ವರ್ ಅವರ ಬಳಿ ಗೃಹಖಾತೆ ಇರಬೇಕಿತ್ತು.ಆರು ತಿಂಗಳಿನಿಂದ ಉತ್ತಮ ಕೆಲಸ ಮಾಡುತ್ತಿದ್ದರು.ಅವರವರೇ ಕಿತ್ತಾಡಿಕೊಂಡು ಖಾತೆ ಬದಲಾವಣೆ ಮಾಡಿಕೊಂಡಿದ್ದಾರೆ.ಸಂಚು ನಡೆಸಲು ಹೋದರೆ ಕಾಂಗ್ರೆಸ್‍ನವರಿಗೇ ಏಟು ಬೀಳುತ್ತದೆ.ನಮಗೆ ಏನೂ ಆಗುವುದಿಲ್ಲ. ಸಚಿವ ಸ್ಥಾನಕ್ಕೆ ನಾನು ಅಂಟಿ ಕುಳಿತಿಲ್ಲ ಎಂದು ಹೇಳಿದರು.

ನಾನು ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಗೃಹ ಇಲಾಖೆಯಲ್ಲಿ ಒಂದು ಪೊಲೀಸ್ ಕಾನ್ಸ್‍ಟೆಬಲ್ ವರ್ಗಾವಣೆಯಲ್ಲೂ ಕೂಡ ಹಸ್ತಕ್ಷೇಪ ಮಾಡಿಲ್ಲ. ಶಾಸಕರ ಪತ್ರದ ಮೇಲೆ ವರ್ಗಾವಣೆಗೆ ಶಿಫಾರಸು ಮಾಡಿದ್ದೇನೆ ಎಂದರು.

ಕೆಆರ್‍ಡಿಸಿಎಲ್ ನಿಗಮ ನೇಮಕಕ್ಕೆ ಅವಕಾಶವಿಲ್ಲ. ನಿಗಮ ಅಧ್ಯಕ್ಷರ ನೇಮಕಕ್ಕೆ ಅವಕಾಶವಿಲ್ಲ. ಆ ಸಂದರ್ಭ ಬಂದಾಗ ಚರ್ಚೆ ಮಾಡುತ್ತೇನೆ. ಏನಾದರೂ ಹೇಳುವುದಿದ್ದರೆ ಧೈರ್ಯವಾಗಿ ನನ್ನ ಬಳಿ ಹೇಳಬೇಕು.ಅನಗತ್ಯವಾಗಿ ಮಾಧ್ಯಮಗಳಲ್ಲಿ ವದಂತಿಗಳನ್ನು ಹಬ್ಬಿಸುವ ಕೆಲಸ ಮಾಡುವುದು ಬೇಡ ಎಂದು ಹೇಳಿದರು.

ನಾನು ಯಾರ ಮೇಲೂ ಒತ್ತಡ ತಂದಿಲ್ಲ, ತರುವುದೂ ಇಲ್ಲ. ಗಾಲ್ಫ್ ಕ್ಲಬ್ ಸಾಕಷ್ಟು ನಿಯಮಾವಳಿಗಳನ್ನು ಉಲ್ಲಂಘಿಸಿದೆ.ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.ಕ್ರಮ ಕೈಗೊಳ್ಳದಿದ್ದರೆ ಅವರ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ