ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯಾವುದೇ ಚರ್ಚೆ ಈ ಅಧಿವೇಶನದಲ್ಲಿ ನಡೆಯಲಿಲ್ಲ

ಬೆಳಗಾವಿ, ಡಿ.21-ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆ ಹುಸಿಯಾಗಿದೆ. ಆ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದ್ದ ಚಳಿಗಾಲ ಅಧಿವೇಶನದಲ್ಲಿ ಕೇವಲ ಆಡಳಿತ – ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ಅಬ್ಬರ, ಪ್ರತಿಷ್ಠೆಗಳ ಪಣಕ್ಕೆ ಸೀಮಿತವಾಗಿ ಕಲಾಪಕ್ಕೆ ತೆರೆ ಬಿದ್ದಿದೆ.

ಹತ್ತು ದಿನಗಳ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅರ್ಧ ದಿನ ಮಾತ್ರ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ನಡೆದಿದೆ. ವಿಧಾನಪರಿಷತ್‍ನಲ್ಲಿ ಆ ಭಾಗದ ಬಗ್ಗೆ ಚರ್ಚೆಯೇ ಇಲ್ಲ. ಕೇವಲ ರಾಜಕೀಯ ಮೇಲಾಟಗಳಿಗೆ ಕಾರಣವಾದಂತಿತ್ತು.

ಬರದ ಮೇಲಿನ ಚರ್ಚೆ, ಧರಣಿ, ಸತ್ಯಾಗ್ರಹ ಇಂತಹವುಗಳನ್ನು ಹೊರತುಪಡಿಸಿದರೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಯಾವುದೇ ಮಹತ್ವದ ಚರ್ಚೆಗಳು ಚಳಿಗಾಲದ ಅಧಿವೇಶನದಲ್ಲಿ ನಡೆಯದೆ ಸದನದ ಆಶಯ ಮರೀಚಿಕೆಯಾಗಿಯೇ ಉಳಿಯಿತು.

ಸಮ್ಮಿಶ್ರ ಸರ್ಕಾರಕ್ಕೆ ಆಪರೇಷನ್ ಕಮಲದ ಭಯ ಕಾಡಿದರೆ ಬಿಜೆಪಿ ಪಕ್ಷ ಆಡಳಿತಾರೂಢ ಪಕ್ಷವನ್ನು ಹೆಜ್ಜೆ ಹೆಜ್ಜೆಗೂ ಹಣಿಯುವ ಕೆಲಸದಲ್ಲಿ ನಿರತವಾಗಿತ್ತು.
ರೈತರು, ಕಬ್ಬು ಬೆಳೆಗಾರರು, ಅಂಗನವಾಡಿ ಕಾರ್ಯಕರ್ತರು, ಕಾರ್ಮಿಕರು, ಅತಿಥಿ ಉಪನ್ಯಾಸಕರು ಸೇರಿದಂತೆ ಹತ್ತಾರು ಸಂಘಟನೆಗಳ ಪ್ರತಿಭಟನೆಗಳ ಕೂಗು ಸರ್ಕಾರಕ್ಕೆ ಕೇಳಲೇ ಇಲ್ಲ. ಹತ್ತು ದಿನಗಳ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದ್ದು, ಕೇವಲ ಅರ್ಧ ದಿನ ಮಾತ್ರ. ಅದು ಬೇಕು-ಬೇಡವೆನ್ನುವಂತೆ ಇತ್ತು.

ಕೋಟ್ಯಂತರ ರೂ.ಖರ್ಚು ಮಾಡಿ ಇಡೀ ಆಡಳಿತ ವ್ಯವಸ್ಥೆಯನ್ನು ಬೆಳಗಾವಿಗೆ ಸ್ಥಳಾಂತರ ಮಾಡಿ ಯಾವ ಪ್ರಯೋಜನಕ್ಕೆ ಇಲ್ಲಿ ಅಧಿವೇಶನ ಮಾಡಬೇಕು.ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಿಲ್ಲ, ಪರಿಹಾರ ಕಂಡುಕೊಳ್ಳುವುದಿಲ್ಲ ಎಂದ ಮೇಲೆ ಅಧಿವೇಶನವಾದರೂ ಏಕೆ ಬೇಕು?ಎಂದು ಇಲ್ಲಿನ ಜನರ ಬೇಸರವಾಗಿತ್ತು.

ವಿಧಾನಸಭೆಯಲ್ಲಿ ಅರ್ಧ ದಿನ ಚರ್ಚೆ ನಡೆಯಿತಾದರೂ ವಿಧಾನಪರಿಷತ್‍ನಲ್ಲಿ ಇದರ ಸುದ್ದಿಯನ್ನೇ ಎತ್ತಲಿಲ್ಲ. ಮಹದಾಯಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ವಸತಿ,ನಿರುದ್ಯೋಗ, ಮಾರುಕಟ್ಟೆ, ನೀರಾವರಿ ಸಮಸ್ಯೆ, ಸಂಪರ್ಕ ವ್ಯವಸ್ಥೆ, ಮೂಲ ಸೌಕರ್ಯ, ಆರೋಗ್ಯ, ಶಿಕ್ಷಣ ಸಮಸ್ಯೆಗಳು ಇಲ್ಲಿ ಕಾಡುತ್ತಿವೆ. ಕನಿಷ್ಠ 10 ದಿನಗಳಲ್ಲಿ 5 ದಿನಗಳಾದರೂ ಈ ಭಾಗದ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ ಅಂತಹ ಯಾವುದೇ ಪ್ರಯತ್ನಗಳು ಇಲ್ಲಿ ನಡೆಯಲಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ನಡೆಯುವಂತೆ ಸಾಂಪ್ರದಾಯಿಕವಾಗಿಯೇ ಅಧಿವೇಶನ ನಡೆಯಿತೇ ಹೊರತು ಯಾವ ಸ್ಪಂದನೆಯೂ ಸಿಗಲಿಲ್ಲ.
ಆಳುವ ಪಕ್ಷಗಳು, ಪ್ರತಿಪಕ್ಷ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟವೆ ಹೊರತು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಹಾಗಾಗಿ ಇಲ್ಲಿನ ಜನರಿಗೆ ತೀವ್ರ ನಿರಾಸೆಯಾಯಿತು.ಪರಿಹಾರ ಮರೀಚಿಕೆಯಾಯಿತು.

ಅಧಿವೇಶನ ಪ್ರಾರಂಭದ ದಿನ ಸಂತಾಪಕ್ಕೆ ಮೀಸಲಾಯಿತು.ನಂತರ ಪ್ರಶ್ನೋತ್ತರ ಕಲಾಪ ಆನಂತರ ಬರ ಪರಿಹಾರ ಅದರ ಮೇಲೆ ಸುದೀರ್ಘ ಚರ್ಚೆ ನಡೆಯಿತು. ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಟ್ಟರೂ ಇದಾದ ಮೇಲೆ ಇಲಾಖಾವಾರು ಸಚಿವರು ಉತ್ತರ ಕೊಟ್ಟು ಹೊಸ ಸಂಪ್ರದಾಯ ಹುಟ್ಟು ಹಾಕಿದ್ದು ವಿಶೇಷವಾಗಿತ್ತು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಾಲ ಮನ್ನಾದ ಮೇಲೆ ಉತ್ತರ ಕೊಡುವ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಸಾಲ ಮನ್ನಾದ ಬಗ್ಗೆ ವಿವರಗಳನ್ನು ಪಡೆಯಲು ಬಿ.ಎಸ್.ಯಡಿಯೂರಪ್ಪ ಅಡ್ಡಿಯಾಗಿದ್ದಾರೆ ಎಂದು ಆಕ್ಷೇಪಿಸಿದ ವಿಷಯಕ್ಕೆ ಬಿಜೆಪಿ ನಿರಂತರವಾಗಿ ಧರಣಿ ಮಾಡಿ ಕಲಾಪಕ್ಕೆ ಅಡ್ಡಿ ಪಡಿಸುತ್ತಿದ್ದು, ಹಲವು ಬಾರಿ ಮುಂದೂಡುವಂತೆ ಮಾಡಿತು.

ಈ ನಡುವೆ ಹಲವು ಪ್ರಮುಖ ಬಿಲ್‍ಗಳನ್ನು ಪಾಸ್ ಮಾಡಿಕೊಳ್ಳಬೇಕಿತ್ತು.ಆದರೆ ಶಾಸಕರ ಕೊರತೆ ಇದ್ದುದರಿಂದ ಸರ್ಕಾರ ಕೈ ಹಾಕಿಲ್ಲ. ಇಂದು ಶಾಸಕರನ್ನು ಕ್ರೋಢೀಕರಿಸುವ ಯತ್ನವನ್ನು ಸರ್ಕಾರ ಮಾಡುತ್ತಿದೆ.ಒಂದು ಮಹತ್ವದ ವಿಷಯವೆಂದರೆ ಒಂಭತ್ತು ಕಚೇರಿಗಳು ಈ ಭಾಗಕ್ಕೆ ಸ್ಥಳಾಂತರವಾಗುವ ಸಂಪುಟದ ನಿರ್ಣಯವನ್ನು ಮಾತ್ರ ಈ ಸಂದರ್ಭದಲ್ಲಿ ಕೈಗೊಳ್ಳಲಾಯಿತು.ಅದನ್ನು ಹೊರತುಪಡಿಸಿದರೆ ಇನ್ಯಾವುದೇ ಮಹತ್ವದ ನಿರ್ಧಾರಗಳು ಹೊರಬೀಳಲಿಲ್ಲ. ಆ ಕಚೇರಿಗಳೂ ಕೂಡ ಉಪಕಚೇರಿಗಳು, ಪ್ರಮುಖ ಇಲಾಖೆಗಳಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ