ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್

ಬೆಳಗಾವಿ, ಡಿ.21-ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗದೆ ಇರುವುದಕ್ಕೆ ವೈಯಕ್ತಿಕವಾಗಿ ನನಗೆ ಬೇಸರವಾಗಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಅಧಿವೇಶನ ಮುಕ್ತಾಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾಪವನ್ನು ನಿಗದಿತ ಸಮಯಕ್ಕೆ ಆರಂಭಿಸುವುದು ಕಾರ್ಯಸೂಚಿ ಪ್ರಕಾರ ಕಲಾಪ ನಡೆಸುವುದು ನನ್ನ ಕರ್ತವ್ಯ.ಅದರ ಹೊರತಾಗಿ ಕಲಾಪದಲ್ಲಿ ನಡೆಯುವ ಚರ್ಚೆ ಬಗ್ಗೆ ನಾನು ವ್ಯಾಖ್ಯಾನ ನೀಡುವುದಿಲ್ಲ. ಅದು ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿ. ಎಲ್ಲಾ ರಾಜಕೀಯ ಪಕ್ಷಗಳು ಅಧಿವೇಶನಕ್ಕೆ ತಮ್ಮ ಮುಖ್ಯಸ್ಥರನ್ನು ಆಯ್ಕೆ ಮಾಡುವಾಗ ಸಾಧಕ-ಬಾಧಕಗಳನ್ನು ಪರಿಶೀಲನೆ ಮಾಡಬೇಕು, ಜವಾಬ್ದಾರಿ ಇರುವವರನ್ನು ಆಯ್ಕೆ ಮಾಡಬೇಕು. ರಾಜಕೀಯ ಕಾರಣ, ಬೇರೆ ಬೇರೆ ಕಾರಣಕ್ಕಾಗಿ ಯಾರಿಗೋ ಜವಾಬ್ದಾರಿ ನೀಡಿ, ಮತ್ತ್ಯಾರನ್ನೋ ಸಚಿವರನ್ನಾಗಿ ಮಾಡಿ ಅವರನ್ನೆಲ್ಲ ನೀವೇ ನಿಭಾಯಿಸಿ ಎಂದರೆ ಅದು ನನ್ನಿಂದ ಸಾಧ್ಯವಿಲ್ಲ ಎಂದರು.

ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗಬೇಕಿತ್ತು.ಮರಳುಗಣಿಗಾರಿಕೆ, ನೀರಾವರಿ ಸೇರಿದಂತೆ ಮುಂತಾದ ವಿಷಯಗಳು ಚರ್ಚೆಯಾಗಲಿಲ್ಲ. ಇದು ನನಗೆ ಬೇಸರ ತಂದಿದೆ. ನನ್ನ ಇತಿಮಿತಿಯಲ್ಲಿ ಶಾಸಕರು ಖುದ್ದಾಗಿ ಹಾಜರಿರುವಂತೆ ಎಚ್ಚರಿಕೆ ವಹಿಸಿದ್ದೇನೆ. ಸದನಕ್ಕೆ ಬಾರದಿರುವವರು ಅನುಮತಿ ಪಡೆದುಕೊಳ್ಳಲೇ ಬೇಕಾದಂತಹ ಅನಿವಾರ್ಯತೆ ಸೃಷ್ಟಿಸಿದ್ದೇನೆ. ಕೆಲವರು ಬಹಳ ದಿನಗಳ ನಂತರ ಸದನಕ್ಕೆ ಹಾಜರಾದಾಗ ಅದನ್ನು ವ್ಯಂಗ್ಯವಾಗಿ ಪ್ರಶ್ನಿಸುವ ಮೂಲಕ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇದನ್ನೂ ಮೀರಿ ನಾನು ಇನ್ನೇನು ಮಾಡಲು ಸಾಧ್ಯ? ಸದನದ ಹಾದಿ ತಪ್ಪಲು ನಾನು ಕಾರಣನಲ್ಲ. ಅದು ರಾಜಕೀಯ ಪಕ್ಷಗಳ ಜವಾಬ್ದಾರಿ ಎಂದರು.

ಪೌರಾಡಳಿತ ಸಚಿವ ರಮೇಶ್ ಜಾರಕಿ ಹೊಳಿ ಅವರು ಸದನಕ್ಕೆ ಗೈರು ಹಾಜರಾದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಅವರು ತಮಗೆ ಗಂಟಲು ನೋವಿದ್ದು, ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರೆ ಎಂದು ನನಗೆ ಪತ್ರ ಬರೆದು ಗೈರಾಗಿದ್ದಾರೆ. ಅದರ ಹೊರತಾಗಿಯೂ ಅವರು ಹೊರಗೆ ಬೇರೆ ಚಟುವಟಿಕೆಯಲ್ಲಿದ್ದರೆ ಅದು ನನಗೆ ಗೊತ್ತಿಲ್ಲ ಎಂದರು.

ಉಳಿತಾಯದ ಅಧಿವೇಶನ:
ಈ ಮೊದಲು ಅಧಿವೇಶನಕ್ಕೆ ಸುಮಾರು 20 ರಿಂದ 22 ಕೋಟಿ ರೂ.ಖರ್ಚಾಗಿತ್ತು.ಆದರೆ ಈ ಬಾರಿ ಅಧಿವೇಶನದಲ್ಲಿ ಬಹಳಷ್ಟು ಮಿತವ್ಯಯ ಕ್ರಮಗಳನ್ನು ಅನುಸರಿಸಿ 8 ರಿಂದ 10 ಕೋಟಿ ಉಳಿಸಿದ್ದೇವೆ. ಉಳಿತಾಯ ಮಾಡುವ ಸಲುವಾಗಿ ಗುಣಮಟ್ಟದಲ್ಲಿ ರಾಜೀ ಮಾಡಿಕೊಂಡಿಲ್ಲ. ಊಟ, ವಸತಿ ಸೌಲಭ್ಯಗಳನ್ನು ಯಥಾರೀತಿ ನೀಡಿದ್ದೇವೆ. ಅದರ ಹೊರತಾಗಿಯೂ ಕೆಲವು ಕ್ರಮ ತೆಗೆದುಕೊಂಡು ಉಳಿತಾಯ ಮಾಡಲಾಗಿದೆ.

ಇದಕ್ಕಾಗಿ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದ ಪ್ರಜ್ವಲ್‍ಕುಮಾರ್ ಘೋಷ್ ಅವರನ್ನು ನೇಮಿಸಿ ಎಲ್ಲಾ ಖರ್ಚು-ವೆಚ್ಚಗಳ, ಸೌಲಭ್ಯಗಳ ಮೇಲೆ ನಿಗಾ ವಹಿಸಲಾಗಿತ್ತು.ಹೀಗಾಗಿ ಉಳಿತಾಯ ಸಾಧ್ಯವಾಗಿದೆ ಎಂದರು.

ಈ ಹಿಂದಿನ ಅಧಿವೇಶನದಲ್ಲಿ ದುಂದುವೆಚ್ಚ ಆಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆಯಲಾಗುತ್ತಿದ್ದು, ಅದರ ಮಧ್ಯಂತರ ವರದಿ ಬಂದ ನಂತರ ಸೂಕ್ತ ತನಿಖೆಗೆ ವಹಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ವಿಧಾನಸಭೆ ಕಾರ್ಯದರ್ಶಿ ಮತ್ತು ತಮ್ಮ ನಡುವಿನ ಕಾನೂನಾತ್ಮಕ ಸಂಘರ್ಷಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿ ನನ್ನನ್ನೂ ಸೇರಿದಂತೆ ಯಾರಿಗೂ ಅಧಿಕಾರಗಳು ಎಂಬುದು ಇಲ್ಲ, ಜವಾಬ್ದಾರಿಗಳಿವೆ. ದಕ್ಷತೆಯನ್ನು ತರುವ ಸಲುವಾಗಿ ನನಗೆ ಹಾಗೂ ಉಪಾಧ್ಯಕ್ಷರಿಗಿರುವ ಅಧಿಕಾರವನ್ನು ಬಳಸಿಕೊಂಡು ಕೆಲವು ಜವಾಬ್ದಾರಿಗಳನ್ನು ಮರು ಹಂಚಿಕೆ ಮಾಡಿದ್ದೇವೆ. ಅದನ್ನು ಪ್ರಶ್ನಿಸಿ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ಹೋಗಿರಬಹುದು. ಭಾರತದಲ್ಲಿ ಎಲ್ಲರಿಗೂ ಸರ್ವಸ್ವತಂತ್ರಗಳಿವೆ. ಅವರು ನ್ಯಾಯಾಲಯಕ್ಕೆ ಹೋಗಿರುವ ಬಗ್ಗೆ ನನ್ನ ಆಕ್ಷೇಪವಿಲ್ಲ ಎಂದರು.

ಅಧಿವೇಶನ ಯಶಸ್ವಿಯಾಗಿ ನಡೆದಿರುವುದಕ್ಕೆ ಪ್ರತಿಪಕ್ಷ, ಆಡಳಿತಪಕ್ಷ, ಶಾಸಕಾಂಗ, ಕಾರ್ಯಾಂಗ, ಮಾಧ್ಯಮ, ಪತ್ರಿಕೋದ್ಯಮದ ಎಲ್ಲರಿಗೂ ಅಭಿನಂದಿಸುವುದಾಗಿ ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ