ಆಂಜನೇಯ ಸ್ವಾಮಿ ಜಾಟ್‌ ಸಮುದಾಯಕ್ಕೆ ಸೇರಿದವರು ಎಂದ ಉತ್ತರ ಪ್ರದೇಶ ಬಿಜೆಪಿ ಸಚಿವ

ಲಖನೌ: ಆಂಜನೇಯ ಸ್ವಾಮಿ ಯಾವ ಜಾತಿಗೆ ಸೇರಿದವರು ಎನ್ನುವ ವಿಚಾರ ಈಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಉತ್ತರ ಪ್ರದೇಶದ ಬಿಜೆಪಿ ಸಚಿವರೊಬ್ಬರು, ಹನುಮಂತ ದಲಿತನು ಅಲ್ಲ, ಮುಸ್ಲಿಮನೂ ಅಲ್ಲ, ಆತ ಜಾಟ್ ಸಮಿದಾಯಕ್ಕೆ ಸೇರಿದವನು ಎಂದು ಹೇಳಿಕೆ ನೀಡಿದ್ದಾರೆ.

ಧಾರ್ಮಿಕ ವ್ಯವಹಾರಗಳ ಖಾತೆ ಸಚಿವ ಲಕ್ಷ್ಮಿ ನಾರಾಯಣ್‌ ಚೌಧರಿ, ಹನುಮಂತ ಜಾಟ್‌ ಸಮುದಾಯಕ್ಕೆ ಸೇರಿದವನು ಎಂದಿದ್ದಾರೆ.

ಹಿಂದು ದೇವತೆ ಹನುಮನ ಲಕ್ಷಣಗಳು ಜಾಟ್‌ ಸಮುದಾಯದ ವ್ಯಕ್ತಿಗೆ ಹೋಲುತ್ತವೆ. ನಾನು ಹನುಮಂತ ಜಾಟ್‌ ಎಂದು ಭಾವಿಸುತ್ತೇನೆ. ಯಾಕೆಂದರೆ ಯಾರಾದರೂ ತೊಂದರೆಗೆ ಸಿಲುಕಿದ್ದಾರೆ ಎಂದರೆ ಜಾಟ್‌ ಸಮುದಾಯವರು ಸಮಸ್ಯೆ ಅಥವಾ ಮನುಷ್ಯರು ಯಾರೆಂದು ತಿಳಿಯದೆಯೇ ಅಲ್ಲಿಗೆ ಧುಮುಕುತ್ತಾರೆ. ಇದೇ ರೀತಿ ಹನುಮಂತನ ನಡವಳಿಕೆಯು ಕೂಡ ಇದನ್ನು ಹೋಲುವಂತೆಯೇ ಇದೆ. ಅಂದು ಸೀತಾಮಾತೆಯನ್ನು ರಾವಣ ಅಪಹರಿಸಿದ್ದಾಗ ಹನುಮ ಕೂಡ ರಾಮನ ಅನುಯಾಯಿಯಾಗಿ ಸಹಾಯಕ್ಕೆ ನಿಂತಿದ್ದ ಎಂದು ತಿಳಿಸಿದರು.

ವ್ಯಕ್ತಿಯ ವಂಶಾವಳಿಯನ್ನು ಆತನ ನಡವಳಿಕೆಯ ಆಧಾರದಿಂದಲೂ ಗುರುತಿಸಬಹುದು. ಸನಾತನ ಧರ್ಮದಲ್ಲಿ ಯಾರು ನಂಬಿಕೆಯನ್ನಿಟ್ಟುಕೊಂಡಿರುತ್ತಾರೋ ಅವರು ಖಂಡಿತವಾಗಿಯು ಹನುಮನ ಪೂಜೆ ಮಾಡುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.

ಈ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹನುಮಂತ ದಲಿತ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ವಿವಾದ ತಣ್ಣಗಾಗುವ ಮೊದಲೇ ಉತ್ತರ ಪ್ರದೇಶ ಬಿಜೆಪಿ ನಾಯಕ ಬುಕ್ಕಾಲ್ ನವಾಬ್ ಅವರು ಹನುಮಂತ ಮುಸ್ಲಿಮ ಎಂದು ಹೇಳಿದ್ದರು. ಈಗ ಸಚಿವ ಲಕ್ಷ್ಮಿ ನಾರಾಯಣ್‌ ಚೌಧರಿ ಪ್ರಕಾರ ಹನುಮ ಜಾಟ್ ಸಮುದಾಯದವನಾಗಿದ್ದಾನೆ.

UP Minister,Lord Hanuman,Jat

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ