ಹಿಂಗಾರು ಮಳೆ ಕೈಕೊಟ್ಟ ಹಿನ್ನಲೆ ಬರಪೀಡಿತ ಪ್ರದೇಶಗಳ 2ನೇ ಪಟ್ಟಿ ಬಿಡುಗಡೆ ಮಾಡಲಿರುವ ರಾಜ್ಯ ಸರ್ಕಾರ

ಬೆಳಗಾವಿ,ಡಿ.21-ರಾಜ್ಯದಲ್ಲಿ ಈ ಬಾರಿ ಹಿಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶಗಳ ವರದಿ ಸಿದ್ದವಾಗಿದ್ದು, ಶೀಘ್ರದಲ್ಲೇ 2ನೇ ಪಟ್ಟಿಯನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿರುವ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯಕ್ಕೆ ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಮೊದಲ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕಳೆದ ಒಂದೂವರೆ ದಶಕಕ್ಕೆ ಹೋಲಿಸಿದರೆ ಈ ಬಾರಿ ಬರಗಾಲ ತೀವ್ರತರದಲ್ಲಿ ಕಾಡುತ್ತಿದೆ. ಈಗಾಗಲೇ 100 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಇದೀಗ ಹಿಂಗಾರು ಮಳೆಯು ಕೈಕೊಟ್ಟಿರುವುದರಿಂದ ಎಫ್‍ಡಿಆರ್‍ಎಫ್ ಮಾರ್ಗಸೂಚಿ ಅನ್ವಯ ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಸಿದ್ದಪಡಿಸಬೇಕೆಂದು ಆಯಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ಕೊಟ್ಟಿದೆ.

ಸರ್ಕಾರದ ಸೂಚನೆ ಪ್ರಕಾರ ಈಗಾಗಲೇ ಜಿಲ್ಲಾಧಿಕಾರಿಗಳು ಬರಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಸಿದ್ದಪಡಿಸಿದ್ದು, ಮುಂದಿನ ವಾರ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಅಧಿಕಾರಿಗಳಿಂದ ಸರ್ಕಾರದ ಕೈಗೆ ವರದಿ ಬಂದ ನಂತರ ಈ ತಿಂಗಳಾಂತ್ಯಕ್ಕೆ ಅಧಿಕೃತ ಪಟ್ಟಿ ಹೊರಬೀಳಲಿದೆ.

ಈಗಾಗಲೇ ಘೋಷಣೆಯಾಗಿರುವ 100 ತಾಲ್ಲೂಕುಗಳ ಜೊತೆಗೆ ಕನಿಷ್ಠ ಪಕ್ಷ ಇನ್ನು 25-30 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ.

ಈ ಬಾರಿ ರಾಜ್ಯದ ಶೇ.60-70ರಷ್ಟು ಪ್ರದೇಶಗಳು ಬರಗಾಲಕ್ಕೆ ತುತ್ತಾಗಿವೆ. ಈಗಾಗಲೇ ಬರಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲು ರಾಜ್ಯ ಸರ್ಕಾರ ಒಂದು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ ಎಂದುಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಲು ಕ್ರಮಗಳನ್ನು ಕೈಗೊಳ್ಳಲಿದೆ.ಬರಪೀಡಿತ ತಾಲ್ಲೂಕುಗಳಲ್ಲಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಕಡ್ಡಾಯವಾಗಿ ಭೇಟಿ ನೀಡಿ ವಸ್ತುಸ್ಥಿತಿಯನ್ನು ತಿಳಿಯಬೇಕು.ಕೇವಲ ಅಧಿಕಾರಿಗಳು ನೀಡುವ ಮಾಹಿತಿಯಿಂದ ವರದಿಯನ್ನು ನೀಡಬಾರದು ಎಂದು ಸೂಚನೆ ಕೊಟ್ಟಿದ್ದಾರೆ.

ಬರಗಾಲವನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಇದನ್ನೇ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ಉಸ್ತುವಾರಿ ಸಚಿವರು, ಅಧಿಕಾರಿಗಳು ಮತ್ತಿತರರು ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಎಲ್ಲೆಲ್ಲಿ ಸಾಧ್ಯವಿದೆಯೋ ಅಂತಹ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದು, ಖಾಸಗಿ ಬೋರ್‍ವೆಲ್‍ಗಳಿಂದ ನೀರು ತರುವುದು, ಮೇವು ಖರೀದಿಸುವುದು, ಉದ್ಯೋಗ ಸೃಷ್ಟಿ ಸೇರಿದಂತೆ ಹತ್ತು ಹಲವು ರೀತಿಯ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿ ವರ್ಗಕ್ಕೆ ತಾಕೀತು ಮಾಡಿದ್ದಾರೆ.
ಕೆಲವು ಬರಪೀಡಿತ ಪ್ರದೇಶಗಳಿಗೆ ಖುದ್ದು ಕುಮಾರಸ್ವಾಮಿಯವರೇ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅರಿಯಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ