ಗದ್ದಲ ಮತ್ತು ಗೊಂದಲದ ನಡುವೆಯೂ ಮೂರು ಪ್ರಮುಖ ವಿಧೇಯಗಳ ಅಂಗೀಕಾರ

ಬೆಳಗಾವಿ, ಡಿ.21-ವಿಧಾನಸಭೆಯಲ್ಲಿ ಗದ್ದಲ, ಗೊಂದಲ ನಡುವೆಯೂ ಮೂರು ಪ್ರಮುಖ ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಅಧಿವೇಶನದ ಕೊನೆಯ ದಿನವಾದ ಇಂದು ಸಾಲಮನ್ನಾ ದಿನಾಂಕವನ್ನು ಸ್ಪಷ್ಟಪಡಿಸಬೇಕು, ಪ್ರತಿಪಕ್ಷ ನಾಯಕ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ನೀಡಿರುವ ಆಕ್ಷೇಪಾರ್ಹ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಗುರುವಾರ ಸಂಜೆಯಿಂದ ಬಿಜೆಪಿ ನಡೆಸುತ್ತಿದ್ದ ಧರಣಿ ಇಂದು ಬೆಳಗ್ಗೆಯೂ ಮುಂದುವರೆದಿತ್ತು.

ಕಲಾಪ ಸುಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಶಾಸನ ರಚನೆಯ ಕಲಾಪವನ್ನು ಕೈಗೆತ್ತಿಕೊಂಡರು.ಅದರ ಪ್ರಕಾರ ಪ್ರಮುಖವಾದ ಮೂರು ವಿಧೇಯಕಗಳು ಅಂಗೀಕಾರಗೊಂಡಿವೆ. ರೈ ತಾಂತ್ರಿಕ ವಿಶ್ವವಿದ್ಯಾನಿಲಯದ ವತಿಯಿಂದ ಖಾಸಗಿ ಕೃಷಿ ವಿಶ್ವವಿದ್ಯಾನಿಲಯ ಆರಂಭಿಸಲು ಈ ಮೊದಲು ವಿಧಾನಸಭೆ ಮತ್ತು ವಿಧಾನಪರಿಷತ್ ಎರಡರಲ್ಲೂ ಅಂಗೀಕಾರ ಸಿಕ್ಕಿತ್ತು.ಆದರೆ ಕೆಲವು ತಿದ್ದುಪಡಿಗಳೊಂದಿಗೆ ಅಂಗೀಕಾರಗೊಂಡ ವಿಧೇಯಕವನ್ನು ಇಂದು ಕಾರ್ಯದರ್ಶಿಯವರು ವಿಧಾನಸಭೆಯಲ್ಲಿ ಮಂಡಿಸಿದರು.ಅದನ್ನು ಅಂಗೀಕರಿಸಲಾಯಿತು.

ಅದರ ನಂತರ ಸಂಸದೀಯ ಕಾರ್ಯದರ್ಶಿಗಳ ಹುದ್ದೆಯನ್ನು ಲಾಭದಾಯಕ ಹುದ್ದೆಯಿಂದ ಕೈಬಿಡುವ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕವನ್ನು ಮಂಡಿಸಿ ಪರ್ಯಾವಲೋಚನೆಗೆ ಒಳಪಡಿಸಿ ಅಂಗೀಕರಿಸಲಾಗಿದೆ.ಈ ಮೂಲಕ ಸಂಸದೀಯ ಕಾರ್ಯದರ್ಶಿಗಳ ಹುದ್ದೆ ಲಾಭದಾಯಕವೆನಿಸಿಕೊಳ್ಳುವುದಿಲ್ಲ. ಅದನ್ನು ಪ್ರಶ್ನಿಸಿ ಯಾರೂ ನ್ಯಾಯಾಲಯಕ್ಕೆ ಹೋಗಲು ಆಗುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸಲು ಈ ಕಾಯ್ದೆಯಿಂದ ಅನುಕೂಲವಾದಂತಾಗಿದೆ.

ಈ ಅಧಿವೇಶನದಲ್ಲಿ ಅಂಗೀಕಾರಗೊಂಡ ಮಹತ್ವದ ಕಾಯ್ದೆಯೆಂದರೆ 2018ನೇ ಸಾಲಿನ ಕರ್ನಾಟಕ ಸಾಲಿನ ಸಿವಿಲ್ ಸೇವೆಗಳ (ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಕಾರ್ಯವಿಧಾನ) ವಿಧೇಯಕ.

ಈಗಾಗಲೇ ಮುಖ್ಯಮಂತ್ರಿಯವರು ಅದನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು. ಇಂದು ಪರ್ಯಾವಲೋಚನೆಗೆ ಒಳಪಟ್ಟು ಗದ್ದಲದ ವಾತಾವರಣ ಇದ್ದುದರಿಂದ ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಲಾಯಿತು.

ಈ ಕಾಯ್ದೆ ಪ್ರಕಾರ ಕೆಪಿಎಸ್‍ಸಿ ನೇಮಕಾತಿಯಲ್ಲಿ ಮೀಸಲಾತಿ ಸೌಲಭ್ಯ ಪಡೆಯುವ ಅಭ್ಯರ್ಥಿಗಳು ಹೆಚ್ಚು ಅಂಕ ಪಡೆದು ಸಾಮಾನ್ಯ ವರ್ಗದಲ್ಲೂ ಆಯ್ಕೆಗೊಳ್ಳಲು ಅವಕಾಶವಾದಂತಾಗಿದೆ.

ಈ ಮೊದಲು ಜಾರಿಯಲ್ಲಿದ್ದಂತಹ ನಿಯಮಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.ಹೈಕೋರ್ಟ್, ಸುಪ್ರೀಂಕೋರ್ಟ್ ತೀರ್ಪು ನೀಡಿ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದಲ್ಲಿ ಮೀಸಲಾತಿ ಪಡೆಯುವ ಅಭ್ಯರ್ಥಿಗಳು ಮೀಸಲಾತಿಯ ಸೌಲಭ್ಯದಲ್ಲೇ ನೇಮಕಾತಿಗೊಳ್ಳಬೇಕು.ಅದರ ಹೊರತಾಗಿ ಹೆಚ್ಚು ಅಂಕ ಪಡೆದು ಸಾಮಾನ್ಯ ವರ್ಗದಲ್ಲಿ ಆಯ್ಕೆಗೊಳ್ಳುವಂತಿಲ್ಲ ಎಂದು ತೀರ್ಪು ಬಂದಿತ್ತು.

ಅದರ ಆಧಾರದ ಮೇಲೆ ಕೆಪಿಎಸ್‍ಸಿಗೆ ರಾಜ್ಯಸರ್ಕಾರ ಸುತ್ತೋಲೆಯೊಂದನ್ನು ರವಾನಿಸಿತ್ತು. ಇದು ಭಾರೀ ವಿವಾದಕ್ಕೀಡಾಗಿತ್ತಲ್ಲದೆ, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‍ಖರ್ಗೆ, ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಬಹಿರಂಗ ಹೇಳಿಕೆಗಳನ್ನು ನೀಡಿ, ಪತ್ರಗಳನ್ನು ಬರೆದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದರು.

ಅದರ ಅನುಸಾರ ಕಾನೂನು ತಿದ್ದುಪಡಿ ತಂದು ಮಸೂದೆಯನ್ನು ಮಂಡಿಸಿ ಅಂಗೀಕಾರಪಡೆಯಲಾಗಿದೆ.
ರಾಜೀವ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಸಚಿವರ ನೇಮಕಾತಿಗೆ ಸಂಬಂಧಪಟ್ಟಂತೆ ರೂಪಿಸಲಾದ ವಿಧೇಯಕವನ್ನು ಅಧಿವೇಶನದಲ್ಲಿ ಮಂಡಿಸಲಾಯಿತಾದರೂ ಅಂಗೀಕಾರಕ್ಕೆ ತಡೆ ನೀಡಲಾಯಿತು.

ಪ್ರಮುಖವಾಗಿ ಋಣಭಾರ ಕಾಯ್ದೆ ನಿನ್ನೆ ಮಂಡನೆಯಾಗಬೇಕಿತ್ತು, ಆದರೆ ಅದು ಇಂದು ಅಜೆಂಡಾದಿಂದ ಹೊರ ಉಳಿದಿದ್ದರಿಂದ ವಿಧಾನಮಂಡಲದಲ್ಲಿ ಮಂಡನೆಯಾಗಲಿಲ್ಲ. ಇಂದಿನ ಕಲಾಪದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣಬೈರೇಗೌಡ ಅವರೇಎಲ್ಲಾ ವಿಧೇಯಕ ಮಂಡಿಸಿ ಅಂಗೀಕಾರ ಪಡೆದುಕೊಂಡರು.

ಈ ಎಲ್ಲಾ ವಿಧೇಯಕಗಳನ್ನು ನಿನ್ನೆಯೇ ಅಂಗೀಕಾರ ಮಾಡಲು ಸರ್ಕಾರ ಇಚ್ಛಿಸಿತ್ತು. ಆದರೆ ಆಡಳಿತ ಪಕ್ಷದ ಶಾಸಕರ ಸಂಖ್ಯಾಬಲ ಕಡಿಮೆ ಇದ್ದು, ಪ್ರತಿಪಕ್ಷ ಶಾಸಕರ ಸಂಖ್ಯಾಬಲ ಹೆಚ್ಚಾಗಿದ್ದರಿಂದ ಒಂದು ವೇಳೆ ಮತಕ್ಕೆ ಹಾಕಿದರೆ ಸೋಲುಂಟಾಗಬಹುದು ಎಂಬ ಕಾರಣದಿಂದಾಗಿ ವಿಧೇಯಕಗಳ ಅಂಗೀಕಾರದ ದುಃಸ್ಸಾಹಸಕ್ಕೆ ನಿನ್ನೆ ಮುಂದಾಗಿರಲಿಲ್ಲ. ನಿನ್ನೆಯಿಂದ ಹೊರಗಿದ್ದ ಆಡಳಿತ ಪಕ್ಷದ ಶಾಸಕರನ್ನು ಕರೆಸಿ ಸಂಖ್ಯಾಬಲ ಹೆಚ್ಚಿಸಿಕೊಂಡು ಇಂದು ಧ್ವನಿ ಮತದ ಮೂಲಕ ವಿಧೇಯಕಗಳನ್ನು ಅಂಗೀಕರಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ