ಬೆಳೆಗಳ ಹಾನಿಗೆ ಕೇಂದ್ರದಿಂದ 1685.52 ಕೋಟಿ ರೂ. ಬಿಡುಗಡೆ, ಸಚಿವ ಎನ್.ಎಚ್.ಶಿವಶಂಕರ್ ರೆಡ್ಡಿ

ಬೆಳಗಾವಿ(ಸುವರ್ಣಸೌಧ), ಡಿ.21- ಪ್ರಕೃತಿ ವಿಕೋಪದಿಂದ ಹಾನಿಯಾದ ಬೆಳೆಗಳಿಗೆ ಕೇಂದ್ರ ಸರ್ಕಾರದಿಂದ 2016ರ ಮುಂಗಾರು ಹಂಗಾಮಿನಲ್ಲಿ ಎನ್‍ಡಿಆರ್‍ಎಫ್ ಅಡಿ ಇನ್‍ಫುಟ್ ಸಬ್ಸಿಡಿಗಾಗಿ 1685.52 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ್ ರೆಡ್ಡಿ ವಿಧಾನಸಭೆಗೆ ತಿಳಿಸಿದರು.

ವಿಧಾನಸಭೆಯಲ್ಲಿ ಮಂಡಿಸಲಾದ ಉತ್ತರದಲ್ಲಿ ಶಾಸಕ ಹರೀಶ್‍ಪೂಂಜ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳೆ ಹಾನಿಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಅನುದಾನವನ್ನು ಜಮೆ ಮಾಡಲಾಗಿದೆ. ರಾಜ್ಯದ 26 ಬರ ಪೀಡಿತ ಜಿಲ್ಲೆಗಳಲ್ಲಿನ 23,59,153 ರೈತರ ಖಾತೆಗೆ ಅನುದಾನವನ್ನು ಜಮಾ ಮಾಡಲಾಗಿದೆ. ಮಳೆಯಾಶ್ರಿತ ಬೆಳೆಯ ಪ್ರತಿ ಹೆಕ್ಟರ್‍ಗೆ 6800ರೂ.

ನೀರಾವರಿ ಬೆಳೆಗೆ ಪ್ರತಿ ಹೆಕ್ಟರ್‍ಗೆ 13,500, ಬಹುವಾರ್ಷಿಕ ಬೆಳೆಗೆ 18ಸಾವಿರ ರೂ.ಗಳನ್ನು ಎಸ್‍ಡಿಆರ್‍ಎಫ್ ಮತ್ತು ಎನ್‍ಡಿಆರ್‍ಎಫ್ ಮಾರ್ಗಸೂಚಿ ಅನ್ವಯ ರೈತರಿಗೆ ಇನ್‍ಫುಟ್ ಸಬ್ಸಿಡಿ ನೀಡಲಾಗುತ್ತಿದೆ.2016ರ ಹಿಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಹಾನಿಗೀಡಾದ ಬೆಳೆಗೆ 795.54 ಕೋಟಿ ರೂ. ಬಿಡುಗಡೆ ಮಾಡಿದ್ದು, 9,08,260 ರೈತರಿಗೆ ಇನ್‍ಫುಟ್ ಸಬ್ಸಿಡಿ ದೊರೆತಿದೆ. ಅಲ್ಲದೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ 2,26,593 ರೈತರಿಗೆ 117.50ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಶೂನ್ಯ ಬಂಡವಾಳ ಸಹಜ ಕೃಷಿ ಪದ್ಧತಿ ಕಾರ್ಯಕ್ರಮಕ್ಕೆ ಐದೂವರೆ ಕೋಟಿ ರೂ.ಬಿಡುಗಡೆಯಾಗಿದ್ದು, ರಾಜ್ಯದ ಐದು ಕೃಷಿ ವಿವಿಗಳಿಗೆ ಮರು ಬಿಡುಗಡೆ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಸುನೀಲ್‍ಕುಮಾರ್ ಅವರ ಪ್ರಶ್ನೆಗೆ ಸಚಿವರು ಉತ್ತಿರಿಸಿದರು.

ಸಂಶೋಧನಾ ಕೇಂದ್ರಗಳಲ್ಲಿ ಶೂನ್ಯ ಬಂಡವಾಳ, ಸಹಜ ಕೃಷಿ ಯೋಜನೆಯ ಪ್ರಾಯೋಗಿಕ ಪ್ರಯೋಗಗಳನ್ನು ಪ್ರಾರಂಭಿಸಲಾಗಿದ್ದು, ಅನುಷ್ಠಾನ ಹಂತದಲ್ಲಿವೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ