ಬೆಳಗಾವಿ(ಸುವರ್ಣಸೌಧ), ಡಿ.20- ಸಾಲ ಮನ್ನಾ ವಿಷಯದಲ್ಲಿ ಬಿಜೆಪಿಯವರು ಆರು ತಿಂಗಳ ಕಾಲ ಕಾಯುವ ವ್ಯವಧಾನವಿಲ್ಲದೆ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ನಿನ್ನೆ ವಿಧಾನಸಭೆಯಲ್ಲಿ ಸರ್ಕಾರ ಸಾಲ ಮನ್ನಾ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ನಾನು ಸಮಗ್ರ ವಿವರಣೆ ನೀಡುತ್ತಿದ್ದೆ.ಆದರೆ, ಅದನ್ನು ಕೇಳುವ ವ್ಯವಧಾನವಿಲ್ಲದೆ ಬಿಜೆಪಿಯವರು ಧರಣಿ ಆರಂಭಿಸಿದರು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಾಲ ಮನ್ನಾಕ್ಕಾಗಿ ಬಜೆಟ್ನಲ್ಲಿ ಹಣ ಮೀಸಲಿರಿಸಲಾಗಿದೆ.ಮುಂದಿನ ವರ್ಷ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾವಾಗಲಿದೆ. ಬಿಜೆಪಿಯವರಿಗೆ ಆರು ತಿಂಗಳು ಕಾಯುವ ವ್ಯವಧಾನ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ನಾನು ಯಡಿಯೂರಪ್ಪ ಅವರ ಬಗ್ಗೆ ಅಧಿವೇಶನದಲ್ಲಿ ಹಗುರವಾಗಿ ಮಾತನಾಡಿದ್ದೇನೆ ಎನ್ನುವ ಬಿಜೆಪಿಯವರ ಆರೋಪ ಹಾಸ್ಯಸ್ಪದ.ಇಷ್ಟು ದಿನ ಯಡಿಯೂರಪ್ಪ ಅವರೇ ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಹಾಗೆ ನೋಡಿದರೆ ನಾವು ಬಿಜೆಪಿ ವಿರುದ್ಧ ಧರಣಿ ಮಾಡಬೇಕಾಗಿದೆ ಎಂದು ಖಾರವಾಗಿ ಮಾತನಾಡಿದರು.
ಸಾಲ ಮನ್ನಾ ಮಾಡಿದ ಕಾರಣಕ್ಕಾಗಿ ನೀರಾವರಿ ಯೋಜನೆಗಳಿಗೆ ಅನುದಾನ ಕಡಿತ ಮಾಡಲಾಗಿದೆ ಎಂಬ ಆರೋಪ ಸರಿಯಲ್ಲ. ನೀರಾವರಿ ಯೋಜನೆಗೂ ಸಾಲ ಮನ್ನಾಕ್ಕೂ ಸಂಬಂಧವಿಲ್ಲ. ನೀರಾವರಿಗೆ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ.ಸಾಲ ಮನ್ನಾಕ್ಕೂ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ.ಮಾಧ್ಯಮಗಳು ತಪ್ಪು ತಿಳುವಳಿಕೆಯಿಂದ ಅಸತ್ಯವಾದ ಮಾಹಿತಿಯನ್ನು ಜನರಿಗೆ ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.