ರಾಜಕೀಯ ತಲ್ಲಣಗಳಿಗೆ ಕಾರಣವಾದ ಆಡಳಿತ ಪಕ್ಷದ ಸದಸ್ಯರು ಮತ್ತು ಬಿಜೆಪಿಯ ನಾಯಕರ ಒಡನಾಟ

ಬೆಳಗಾವಿ, ಡಿ.20- ಬೆಳಗಾವಿಯ ಚಳಿಗಾಲದ ಅಧಿವೇಶನದ ಕೊನೆಯ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಕೂಡ ಚುರುಕು ಪಡೆಯುತ್ತಿದ್ದು, ಆಡಳಿತ ಪಕ್ಷದ ಕೆಲವು ಶಾಸಕರು, ವಿಧಾನಪರಿಷತ್ ಸದಸ್ಯರು ಬಿಜೆಪಿ ನಾಯಕರ ಜತೆ ಆತ್ಮೀಯ ಒಡನಾಟ ರೂಢಿಸಿಕೊಂಡಿರುವುದು ರಾಜಕೀಯ ತಲ್ಲಣಗಳಿಗೆ ಕಾರಣವಾಗಿದೆ.

ನಿನ್ನೆ ವಿಧಾನಪರಿಷತ್ ಸದಸ್ಯ ಮಹಂತೇಶ್ ಕವಟಗಿಮಠ ಅವರು ಆತಿಥ್ಯದಲ್ಲಿ ನಡೆದ ಭೋಜನ ಕೂಟದಲ್ಲಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಮತ್ತು ವಿಧಾನಪರಿಷತ್ ಪ್ರತಿಪಕ್ಷದ ನಾಯಕಿ ಹಾಗೂ ಸಚಿವೆ ಜಯಮಾಲಾ ಭಾಗವಹಿಸಿದ್ದು ಕುತೂಹಲ ಕೆರಳಿಸಿದೆ.

ಇಂದು ಬೆಳಗ್ಗೆ ಬಿಜೆಪಿ ನಾಯಕರು ನಡೆಸಿದ ಸಭೆಯ ವೇಳೆ ಕಾಂಗ್ರೆಸ್‍ನ ಹಿರಿಯ ನಾಯಕರಾದ ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಕಾಣಿಸಿಕೊಂಡಿದ್ದರು ಎಂಬ ವದಂತಿಗಳು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ.

ತೆರೆಮರೆಯಲ್ಲಿ ಬಹಳಷ್ಟು ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಅತೃಪ್ತ ಶಾಸಕರು ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿರುವ ಮಾಹಿತಿ ಗುಪ್ತಚರ ಇಲಾಖೆಯಿಂದ ಮುಖ್ಯಮಂತ್ರಿಯವರಿಗೆ ರವಾನೆಯಾಗುತ್ತಿದೆ.

ಬೆಳಗಾವಿಯಲ್ಲಿ ಗುಪ್ತಚರ ಇಲಾಖೆ ಪ್ರತಿನಿತ್ಯ ಶಾಸಕರ ಚಲನವಲನಗಳ ಮೇಲೆ ನಿಗಾ ಇಟ್ಟಿದೆ.ಆದರೂ ಕೆಲವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಪ್ರತ್ಯೇಕ ಸಭೆ ನಡೆಸುವುದು, ಬಿಜೆಪಿ ನಾಯಕರ ಜತೆ ನಿರಂತರ ಸಂಪರ್ಕದಲ್ಲಿರುವುದು ಮುಂದುವರೆದಿದೆ.

ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸದಿಂದ ದಿಢೀರ್ ವಾಪಸಾದರಾದರೂ ಬೆಳಗಾವಿಯ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿಲ್ಲ.

ಮಂಗಳವಾರ ನಡೆದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು, ಅನಂತರ ಅಪೌಚಾರಿಕವಾಗಿ ಅಧಿವೇಶನದಲ್ಲಿ ಕೆಲ ಕಾಲ ಅತಿಥಿಯಂತೆ ಭಾಗವಹಿಸಿ ಅಲ್ಲಿಂದ ತೆರಳಿದ್ದರು.

ಸಿದ್ದರಾಮಯ್ಯ ಅಧಿವೇಶನದಲ್ಲಿರುತ್ತಾರೆ.ಶಾಸಕರ ಚಟುವಟಿಕೆಗಳಿಗೆ ಬ್ರೇಕ್ ಹಾಕುತ್ತಾರೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ. ಮೇಲ್ನೋಟಕ್ಕೆ ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಂತೆ ವರ್ತಿಸುತ್ತಿದ್ದರೂ ಒಳಗೊಳಗೆ ಆತ್ಮೀಯತೆ ಹೆಚ್ಚಾಗುತ್ತಿದೆ.

ಪೌರಾಡಳಿತ ಹಾಗೂ ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ನಿನ್ನೆ ಇತ್ತ ಸಚಿವ ಸಂಪುಟಸಭೆ ನಡೆಸುತ್ತಿದ್ದರೂ ಅದರಲ್ಲಿ ಭಾಗವಹಿಸದೆ ಬಿಜೆಪಿ ನಾಯಕರು ಕರೆದಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು.

ಇದಕ್ಕೂ ಒಂದು ದಿನ ಮೊದಲು ಡಿ.ಕೆ.ಶಿವಕುಮಾರ್ ಅವರು ಕರೆದಿದ್ದ ಔತಣ ಕೂಟದಲ್ಲಿ ಭಾಗವಹಿಸದೆ ದೂರ ಇದ್ದ ರಮೇಶ್ ಜಾರಕಿಹೊಳಿ ಅವರ ಧೋರಣೆ ಕಾಂಗ್ರೆಸ್‍ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಇತ್ತ ಸಂಪುಟ ಸಭೆಯಲ್ಲೂ ಭಾಗವಹಿಸುವುದಿಲ್ಲ. ಅಧಿವೇಶನಕ್ಕೂ ಹಾಜರಾಗುವುದಿಲ್ಲ. ಕಾಂಗ್ರೆಸ್ ನಾಯಕರ ಜತೆಯಂತೂ ಸೇರುವುದೇ ಇಲ್ಲ. ಆದರೆ, ಬಿಜೆಪಿ ನಾಯಕರ ಜತೆ ಅವರ ಆತ್ಮೀಯತೆ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮಟ್ಟಿಗೆ ಹೆಚ್ಚಾಗಿದೆ.

ಸಚಿವ ಸಂಪುಟ ವಿಸ್ತರಣೆಯವರೆಗೂ ಯಾವುದೇ ಅಪಾಯ ಇಲ್ಲ ಎಂದು ಹೇಳಲಾಗುತ್ತಿದೆಯಾದರೂ ಶಾಸಕರ ಈ ನಡವಳಿಕೆಗಳು ಕಾಂಗ್ರೆಸ್‍ನ ಆತಂಕಕ್ಕೆ ಕಾರಣವಾಗಿದೆ.

ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿ ಅವರನ್ನು ಉಪ ಮುಖ್ಯಮಂತ್ರಿ ಮಾಡುವ ಆಮಿಷ ಹೊಡ್ಡಿದ್ದಾರೆ ಎನ್ನಲಾಗಿದೆ.

ಸರ್ಕಾರ ರಚಿಸುವ ಅಥವಾ ಸಮ್ಮಿಶ್ರ ಸರ್ಕಾರವನ್ನು ಪಥನಗೊಳಿಸುವ ಶಾಸಕರ ಸಂಖ್ಯಾಬಲವನ್ನು ಕ್ರೂಢಿಕರಿಸಕೊಡಬೇಕು ಎಂಬ ಬೇಡಿಕೆ ಮುಂದಿಡಲಾಗಿದ್ದು, ಇದನ್ನು ಈಡೇರಿಸಿದರೆ ಉಪ ಮುಖ್ಯಮಂತ್ರಿ ಮಾಡುವ ಆಮಿಷ ಹೊಡ್ಡಲಾಗಿದೆ ಎನ್ನಲಾಗಿದೆ.

ಉಳಿದಂತೆ ಎಸ್.ಆರ್.ಪಾಟೀಲ್ ಮತ್ತು ಜಯಮಾಲ ಅವರು ತಾವು ಬಿಜೆಪಿ ನಾಯಕರ ಸಂಪರ್ಕವನ್ನು ರಾಜಕೀಯವಾಗಿ ತಳಕು ಹಾಕುವುದು ಬೇಡ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಆರ್.ವಿ.ದೇಶಪಾಂಡೆ ಕೂಡ ತಮ್ಮ ನಾಯಕರ ನಡವಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ