ಬೆಳಗಾವಿ (ಸುವರ್ಣಸೌಧ), ಡಿ.19- ಬರದ ಮೇಲಿನ ಚರ್ಚೆಗೆ ಮುಖ್ಯಮಂತ್ರಿಯವರಿಂದ ಉತ್ತರ ಕೊಡಿಸದೆ ಮೊದಲು ಕಂದಾಯ, ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಸಚಿವ, ಪಶುಸಂಗೋಪನೆ ಹಾಗೂ ಕೃಷಿ ಸಚಿವರಿಂದ ಉತ್ತರ ಕೊಡಿಸಿದ ಬಗ್ಗೆ ಸಂಪುಟ ಸಚಿವರೆ ಆಕ್ಷೇಪ ವ್ಯಕ್ತ ಪಡಿಸಿದ ಘಟನೆ ನಡೆಯಿತು.
ವಿಧಾನಸಭೆಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು, ನಾನು ನಾಲ್ಕು ಬಾರಿ ಈ ಮನೆಯ ಸದಸ್ಯನಾಗಿದ್ದೇನೆ. ಯಾವುದೇ ಚರ್ಚೆಯಾದರೂ, ಮೊದಲು ಮುಖ್ಯಮಂತ್ರಿ ಉತ್ತರ ಕೊಡುತ್ತಿದ್ದರು. ಅನಂತರ ಸಚಿವರು ಉತ್ತರ ಕೊಡುತ್ತಿದ್ದರು.ಈ ಅಧಿವೇಶನದಲ್ಲಿ ಹೊಸ ಸಂಪ್ರದಾಯ ಆರಂಭಿಸಲಾಗಿದೆ.ಎಲ್ಲಾ ಸಚಿವರು ಉತ್ತರ ನೀಡಿದ ಮೇಲೆ ಮುಖ್ಯಮಂತ್ರಿಯವರಿಗೆ ಹೇಳಲು ಏನು ಉಳಿದಿರುತ್ತದೆ ಎಂದು ಆಕ್ಷೇಪ ವ್ಯಕ್ತ ಪಡಿಸಿದರು.
ಬರಗಾಲ ಪರಿಸ್ಥಿತಿ ಬಗ್ಗೆ ಕಳೆದ ಮಂಗಳವಾರದಿಂದ ಸಮಯ ಸಿಕ್ಕಾಗಲೇಲ್ಲಾ ಚರ್ಚೆ ನಡೆದಿತ್ತು.ಸರಿ ಸುಮಾರು 9 ಗಂಟೆ ಚರ್ಚೆಯಾಗಿತ್ತು.ಅದಕ್ಕೆ ನಿನ್ನೆ ಮುಖ್ಯಮಂತ್ರಿ ಉತ್ತರ ನೀಡಲು ಮುಂದಾದರು.ಆದರೆ ಪ್ರತಿಪಕ್ಷದ ನಾಯಕರಿಲ್ಲ ಎಂಬ ಕಾರಣಕ್ಕೆ ಸಭಾಧ್ಯಕ್ಷರು ನಾಳೆ ಉತ್ತರ ನೀಡಿ ಎಂದು ಸಲಹೆ ನೀಡಿದ್ದರು.ಇಂದು ಬೆಳಗ್ಗೆ ಸದನ ಆರಂಭವಾದಾಗ ಕಂದಾಯ ಸಚಿವರು ಉತ್ತರ ನೀಡಲಾರಂಭಿಸಿದರು.ನಂತರ ಗ್ರಾಮೀಣಾಭಿವೃದ್ಧಿ-ಪಂಚಾಯತ್ರಾಜ್ ಸಚಿವ ಕೃಷ್ಣಬೈರೇಗೌಡ, ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ, ಕೃಷಿ ಎನ್.ಎಚ್.ಶಿವಶಂಕರ ರೆಡ್ಡಿ ಅವರು ಉತ್ತರ ನೀಡಿದರು.
ಈ ಮಧ್ಯ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಈ ರೀತಿ ಆಕ್ಷೇಪ ವ್ಯಕ್ತ ಪಡಿಸಿದರು.