ಬೆಂಗಳೂರು, ಡಿ.17- ಕೆಜಿಎಫ್ನ ಬಿಜಿಎಂಎಲ್ ಉಪಯೋಗಿಸದೆ ಉಳಿದಿರುವ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರ ಆಸಕ್ತಿ ಹೊಂದಿದೆ ಎಂದು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಾದ ರೂಪಕಲಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಯಡಿ ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಸ್ಥಾಪಿಸುತ್ತಿರುವ ಕೈಗಾರಿಕಾ ಪ್ರದೇಶ ಮಾದರಿಯಲ್ಲಿ ಬಿಜಿಎಂಎಲ್ನಲ್ಲೂ ಸ್ಥಾಪಿಸುವ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ ಎಂದರು.
ಕೇಂದ್ರ ಸರ್ಕಾರ 12 ಸಾವಿರ ಎಕರೆ ಜಮೀನನ್ನು ರಾಜ್ಯ ಸರ್ಕಾರಕ್ಕೆ ಪೂರ್ಣ ಪ್ರಮಾಣದಲ್ಲಿ ನೀಡುವುದೇ ಆದರೆ 1600 ಕೋಟಿ ರೂ.ನೀಡಲು ರಾಜ್ಯ ಸರ್ಕಾರ ಸಿದ್ದವಿದೆ.ಗಣಿ, ಕೈಗಾರಿಕೆ ಇಲಾಖೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ.2001ರಲ್ಲೇ ಬಿಜಿಎಂಎಲ್ ಕಾರ್ಖಾನೆ ಸ್ಥಗಿತಗೊಂಡಿದ್ದು, 2014ರಲ್ಲಿ ಲೀಸ್ ಅವಧಿ ಮುಕ್ತಾಯವಾಗಿದೆ ಎಂದರು.
ಶಾಸಕಿ ರೂಪಕಲಾ ಮಾತನಾಡಿ, 30ಸಾವಿರ ಕುಟುಂಬಗಳು ಇದರಿಂದಾಗಿ ಉದ್ಯೋಗ ಕಳೆದುಕೊಂಡಿವೆ. ರಾಷ್ಟ್ರಕ್ಕೆ 8ಲಕ್ಷ ಕೆಜಿ ಬಂಗಾರವನ್ನು ಈ ಕಾರ್ಖಾನೆ ನೀಡಿದ್ದು, ಮಾನವೀಯ ದೃಷ್ಟಿಯಿಂದ ಈ ಕುಟುಂಬದ ಸದಸ್ಯರೊಬ್ಬರಿಗೆ ಪರ್ಯಾಯ ಉದ್ಯೋಗ ಒದಗಿಸಬೇಕೆಂದು ಅವರು ಹೇಳಿದರು.