ಕ್ವಾರಿ ಮತ್ತು ಕಲ್ಲು ಗಣಿ ಮಾಲೀಕರ ನೆರವಿಗೆ ಬರುವಂತೆ ಸರ್ಕಾರಕ್ಕೆ ಬಿಜೆಪಿ ಶಾಸಕರ ಒತ್ತಾಯ

ಬೆಳಗಾವಿ(ಸುವರ್ಣಸೌಧ), ಡಿ.17-ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಓನರ್ ಅಸೋಸಿಯೇಷನ್ ಪ್ರತಿಭಟನೆ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಪ್ರತಿಪಕ್ಷ ಬಿಜೆಪಿ ಶಾಸಕರು ಸರ್ಕಾರ ಕ್ವಾರಿ ಮತ್ತು ಕಲ್ಲು ಗಣಿ ಮಾಲೀಕರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.

ಬೆಳಗಾವಿಯ ಸುವರ್ಣಸೌಧದ ಮುಂದಿರುವ ಕೊಂಡಸಕೊಪ್ಪದಲ್ಲಿ ಜೆಲ್ಲಿ ಕ್ರಷರ್ಸ್ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ.ಅಲ್ಲಿಗೆ ಭೇಟಿ ನೀಡಿ ವಿಧಾನಸಭೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಷಯವನ್ನು ಪ್ರಸ್ತಾಪಿಸಿದರು.

ಜೆಲ್ಲಿ ಕ್ರಷರ್ಸ್ ಮತ್ತು ಕ್ವಾರಿ ಮಾಲೀಕರು 13 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಕೇವಲ ಉದ್ಯಮಿಗಳ ಹಿತಾಸಕ್ತಿ ಅಲ್ಲ. ಮರಳು, ಜೆಲ್ಲಿ, ಎಂಪ್ಯಾಂಡ್ ಸಿಗದೇ ಇದ್ದರೆ ಅಭಿವೃದ್ಧಿಯೇ ಕುಂಟಿತಗೊಳ್ಳುತ್ತದೆ. ಸರ್ಕಾರ ಯಾವ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರ ಮಾಲೀಕರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕೆಂದು ಮನವಿ ಮಾಡಿ ಬೇಡಿಕೆಗಳ ಪಟ್ಟಿಯನ್ನು ಅಧಿವೇಶನದಲ್ಲಿ ಓದಿದರು.

ನಂತರ ಮಾತನಾಡಿದ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ಕುಮಾರ್‍ಬಂಗಾರಪ್ಪ, ಗೂಳಿಹಟ್ಟಿ ಶೇಖರ್ ಮತ್ತಿತರರು, ಕಲ್ಲು ಮತ್ತು ಮರಳು ಕೊರತೆಯಿಂದಾಗಿ ಅಭಿವೃದ್ಧಿ ಕುಂಟಿತವಾಗುತ್ತಿರುವ ಬಗ್ಗೆ ಸರ್ಕಾರದ ಗಮನ ಸೆಳೆದರು.ಸರ್ಕಾರ ಮೊದಲು ಎಂಪ್ಯಾಂಡ್ ಮತ್ತು ಮರಳನ್ನು ಗಣಿ ಕಾಯ್ದೆಯಿಂದ ಕೈ ಬಿಡಬೇಕು.ಇಲ್ಲವಾದರೆ ಸುಮಾರು 7ರಿಂದ 8 ಇಲಾಖೆ ಅಧಿಕಾರಿಗಳು ಕ್ವಾರಿ ನಡೆಸುವಲ್ಲಿ ಕಿರುಕುಳ ನೀಡುತ್ತಾರೆ ಎಂದು ಹೇಳಿದರು.

ಸರ್ಕಾರ ಇತ್ತೀಚೆಗೆ ಕಲ್ಲುಕ್ವಾರಿ ಮತ್ತು ಮರಳು ಎಂಪ್ಯಾಂಡ್‍ನವರನ್ನು ನಿರ್ಲಕ್ಷ್ಯ ಮಾಡುತ್ತಿದೆ.ಇದರ ಪರಿಣಾಮ ಕೆಟ್ಟದಾಗಿರುತ್ತದೆ.ಅದಕ್ಕೆ ಅವಕಾಶ ಮಾಡಿಕೊಡಬೇಡಿ, ಕ್ರಮ ಕೈಗೊಳ್ಳದಿದ್ದರೆ ಮುಂದಿನ ಮಾರ್ಚ್ ವೇಳೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಮರಳು ಮತ್ತು ಎಂಪ್ಯಾಂಡ್ ಲಭ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.
ಜೆಡಿಎಸ್‍ನ ಕೆ.ಎಂ.ಶಿವಲಿಂಗೇಗೌಡ, ಶ್ರೀನಿವಾಸ್‍ಗೌಡ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ