ಅಪಘಾತಗಳಿಂದ ಜೀವಹಾನಿ ತಪ್ಪಿಸಲು ಸಾರಿಗೆ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು, ಡಿ.15- ಅಪಘಾತಗಳಿಂದಾಗುವ ಜೀವಹಾನಿ ತಪ್ಪಿಸಲು ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಜಂಟಿ ಸಾರಿಗೆ ಆಯುಕ್ತ  ಜ್ಞಾನೇಂದ್ರಕುಮಾರ್ತಿಳಿಸಿದ್ದಾರೆ.

ಜ್ಞಾನಭಾರತಿ ಆರ್‍ಟಿಒ ವ್ಯಾಪ್ತಿಯಲ್ಲಿ ಪ್ರಯಾಣಿಕ ವಾಹನಗಳನ್ನು ತಪಾಸಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಮಂಡ್ಯದ ಕನಗನಮರಡಿಯ ವಿಸಿ ನಾಲೆಗೆ ಖಾಸಗಿ ಬಸ್ ಉರುಳಿಬಿದ್ದು ಮೂವತ್ತು ಜನ ಅಸುನೀಗಿದ್ದರು. ಈ ಅವಘಡವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಅಪಘಾತಗಳಿಗೆ ಕಡಿವಾಣ ಹಾಕುವಂತೆ ಸೂಚಿಸಿದೆ. ಈ ಸಂಬಂಧ ಮೈಸೂರು, ಮಂಡ್ಯ ಹಾಗೂ ರಾಮನಗರ, ಭಾಗಗಳಿಂದ ಮೈಸೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್, ಮಾಕ್ಸಿಕ್ಯಾಬ್, ಟಿಟಿ ಸೇರಿದಂತೆ ಸುಮಾರು ಐವತ್ತು ಪ್ರಯಾಣಿಕ ವಾಹನಗಳ ತೀವ್ರತರ ತಪಾಸಣೆ ನಡೆಸಲಾಯಿತು ಎಂದರು.

ಪರವಾನಗಿ, ಎಫ್‍ಸಿ, ವಿಮೆ ಇಲ್ಲದ, ರಸ್ತೆ ತೆರಿಗೆ ಕಟ್ಟದ ಇಪ್ಪತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ಖಾಸಗಿ ಬಸ್‍ಗಳು ಕನಿಷ್ಠ ಪ್ರಯಾಣಿಕ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ. ಇನ್ನು ಕೆಲವು ಬಸ್‍ಗಳಲ್ಲಿ ನೋಂದಣಿ ಸಂಖ್ಯೆಗಳೇ ಇಲ್ಲ. ತುರ್ತು ಬಾಗಿಲುಗಳು ಸರಿ ಇಲ್ಲ. ಒಂದು ಮಾರ್ಗಕ್ಕೆ ಪರ್ಮಿಟ್ ತೆಗೆದುಕೊಂಡು ರಾಜರೋಷವಾಗಿ ಬೇರೊಂದು ಮಾರ್ಗದಲ್ಲಿ ಸಂಚರಿಸುತ್ತಿವೆ ಎಂದು ತಿಳಿಸಿದರು.

ಜ್ಞಾನಭಾರತಿ ಆರ್ ಟಿಒ ಅಧಿಕಾರಿ ಜಿ. ಹೇಮಂತ್‍ಕುಮಾರ್ ಮಾತನಾಡಿ, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಉತ್ತಮ ಸ್ಥಿತಿಯಲ್ಲಿರದ, ಸಂಚಾರ ಯೋಗ್ಯವಲ್ಲದ ವಾಹನಗಳಿಂದ ಮುಂದಾಗಬಹುದಾದ ಜೀವಹಾನಿಯನ್ನು ತಪ್ಪಿಸಲು ತಪಾಸಣೆ ಕಾರ್ಯ ಅನಿವಾರ್ಯವಾಗಿದ್ದು, ಪ್ರಯಾಣಿಕರು ಅಧಿಕಾರಿಗಳಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಜಂಟಿ ಸಾರಿಗೆ ಆಯುಕ್ತ ಜ್ಞಾನೇಂದ್ರಕುಮಾರ್ ಮಾರ್ಗದರ್ಶನದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಹೇಮಂತ್‍ಕುಮಾರ್ ನೇತೃತ್ವದಲ್ಲಿ ಮೋಟಾರು ವಾಹನ ನಿರೀಕ್ಷಕರಾದ ಜಗದೀಶ್, ವಿನಯ ಚೌದರಿ ಹಾಗೂ ಸಿಬ್ಬಂದಿ ತಪಾಸಣಾ ಕಾರ್ಯಾಚರಣೆ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ