ಚಾಮರಾಜನಗರ: ಗ್ರಾಮ ದೇವತೆ ಮತ್ತು ವರ ಕೊಡುವ ತಾಯಿ ಎಂದೇ ಜನಜನಿತವಾಗಿದ್ದ ಸೂಲ್ವಾಡಿ ಬಿಚ್ಚುಕತ್ತಿ ಮಾರಮ್ಮನ ದೇಗುಲ ಇದೇ ಮೊದಲ ಬಾರಿಗೆ ಬಂದ್ ಆಗಿದೆ.
ಪ್ರತಿನಿತ್ಯವೂ ದೇಗುಲಕ್ಕೆ ಆಗಮಿಸಿ ಭಕ್ತರು ಇಷ್ಟಾರ್ಥಕ್ಕಾಗಿ ವರ ಕೇಳುತ್ತಿದ್ದರು, ಪೂಜೆ ಸಲ್ಲಿಸುತ್ತಿದ್ದರು. ಎಂದಿಗೂ ಪೂಜೆ ನಿಲ್ಲದ ಮಾರಮ್ಮನ ದೇಗುಲಕ್ಕೆ ವಿಷ ಪ್ರಸಾದದ ಬಳಿಕ ಬೀಗಮುದ್ರೆ ಬಿದ್ದಿದೆ.
ವಿಷಾಹಾರ ಸೇವನೆ ಹಿನ್ನೆಲೆಯಲ್ಲಿ ದೇವಾಲಯದ ಆವರಣ ಮತ್ತು ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ದೇವಸ್ಥಾನದ ಪುರೋಹಿತರು, ಅಡುಗೆ ತಯಾರಕರು, ಭದ್ರತಾ ಸಿಬ್ಬಂದಿಯ ಕುಟುಂಬಗಳಲ್ಲೂ ಸಾವು, ನೋವು ಸಂಭವಿಸಿದ್ದರಿಂದ ಸಂಬಂಧಿಕರು ಮತ್ತು ಗ್ರಾಮಸ್ಥರು
ಆಸ್ಪತ್ರೆಯಲ್ಲಿದ್ದಾರೆ.
ಇಂದು ಸಚಿವ-ಶಾಸಕರು ಭೇಟಿ: ಇನ್ನು ಈ ದುರ್ಘಟನೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ ಶಾಸಕರು ಇಂದು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ, ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆ ಹಾಗೂ ಸೂಲ್ವಾಡಿ ಗ್ರಾಮಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.