ಚಿನ್ನಪ್ಪಿ ಮೈಮೇಲೆ ಮಾರಮ್ಮ-ಬಯಲಾಯ್ತು ಮತ್ತಷ್ಟು ಸತ್ಯ!

ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ದೇವಾಲಯದ ಟ್ರಸ್ಟಿ ಚಿನ್ನಪ್ಪಿ ಮೈ ಮೇಲೆ ಮಾರಮ್ಮ ದೇವಿ ಬಂದಿದ್ದು, ಆರೋಪಿಗಳು ನಾಲ್ವರು ಅಲ್ಲ, ಆರು ಜನ ಎಂದು ಹೇಳಿರುವುದಾಗಿ ಬಿಸಿ ಬಿಸಿ ಚರ್ಚೆ ಸುಳ್ವಾಡಿಯಲ್ಲಿ ಆರಂಭಗೊಂಡಿದೆ.

ಶನಿವಾರ ಹುಣ್ಣಿಮೆ ಆಗಿದ್ದರಿಂದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಈ ವೇಳೆ ಪೂಜೆಯಲ್ಲಿ ಭಾಗಿಯಾಗಿದ್ದ ಚಿನ್ನಪ್ಪಿ ಮೈಮೇಲೆ ಮಾರಮ್ಮ ದೇವಿಯ ಆಹ್ವಾನೆಯಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಭಕ್ತರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಎಷ್ಟು ಜನ ಕೇಳಿದರು. ಆಗ ಚಿನ್ನಪ್ಪಿ ಯಾವುದೇ ಮಾತುಗಳನ್ನಾಡದೇ ಬರೀ ಕೈ ಬೆರಳುಗಳನ್ನು ತೋರಿಸಿದ್ದಾರೆ. ಅಲ್ಲದೇ ಈ ಬೆನ್ನಲ್ಲೇ ಚಿನ್ನಪ್ಪಿ ದೇವಾಲಯದ ಸುತ್ತ ಇರುವ ಕಲ್ಲುಮುಳ್ಳುಗಳನ್ನು ಲೆಕ್ಕಿಸದೆ ಉರುಳಾಡಿದ್ದಾರೆ. ಉರುಳುವ ವೇಳೆ ಮೈಕೈ ಪರಚಿ ರಕ್ತ ಸುರಿದಿದೆ.

ಒಟ್ಟಿನಲ್ಲಿ ಇದೀಗ ಭಕ್ತರು ಕೇಳಿದ ಪ್ರಶ್ನೆಗೆ ಮೊದಲು ನಾಲ್ಕು ಬೆರಳು ತೋರಿಸಿ, ನಂತರ ಎರಡು ಬೆರಳು ತೋರಿಸುವ ಮೂಲಕ ಪ್ರಕರಣದಲ್ಲಿ ಆರು ಜನರ ಕೈವಾಡವಿದೆ ಎಂಬ ಸೂಚನೆಯನ್ನೇ ಮಾರಮ್ಮ ದೇವಿ ಚಿನ್ನಪ್ಪಿ ಮೂಲಕ ಹೇಳಿಸಿದ್ದಾರೆ ಎಂಬುವುದು ಜನರ ನಂಬಿಕೆಯಾಗಿದೆ. ಚಿನ್ನಪ್ಪಿ ಮೈಮೇಲೆ ತಾಯಿ ಪ್ರತಿ ಹುಣ್ಣಿಮೆ ದಿನದಂದು ಬಂದು ಭಕ್ತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ. ಈ ಹಿಂದೆಯೂ ಚಿನ್ನಪ್ಪಿ ಮೈ ಮೇಲೆ ಮಾರಮ್ಮ ತಾಯಿ ಬಂದಿದ್ದಳು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಸುಳ್ವಾಡಿ ವಿಷ ಪ್ರಸಾದ ದುರಂತ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆ ಆಗಿದ್ದು, ಇನ್ನು ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ 40 ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಪ್ರಮುಖ ಆರೋಪಿಗಳಾದ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ (52), ಅಂಬಿಕಾ (35), ದೇವಸ್ಥಾನದ ವ್ಯವಸ್ಥಾಪಕ ಮಾದೇಶ ಮಹದೇವಸ್ವಾಮಿ (46), ದೊಡ್ಡಯ್ಯತಂಬಡಿ (35) ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಸದ್ಯ ಆರೋಪಿಗಳನ್ನು ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ