ಸಾಹಿತಿ ಅಮಿತಾವ್ ಘೋಷ್​​ಗೆ 54ನೇ ಜ್ಞಾನಪೀಠ ಪುರಸ್ಕಾರ

ನವದೆಹಲಿ: 2018ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಖ್ಯಾತ ಇಂಗ್ಲಿಷ್ ಕಾದಂಬರಿಕಾರ ಅಮಿತಾವ್ ಘೋಷ್​ ಅವರು ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಯನ್ನು ಗೌರವಿಸಿ 54ನೇ ಪ್ರತಿಷ್ಠಿತ ಪ್ರಶಸ್ತಿಗೆ ಘೋಷ್​ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

2007 ರಲ್ಲಿ ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ಅಮಿತಾವ್ ಅವರು ತಮ್ಮ ಕಾದಂಬರಿಗಳಲ್ಲಿ ಐತಿಹಾಸಿಕ ಘಟನೆಗಳನ್ನು ಆಧುನಿಕ ಕಾಲಘಟ್ಟಗಳಿಗೆ ಹೋಲಿಸಿ ಸನ್ನಿವೇಶಗಳನ್ನು ಕಟ್ಟಿಕೊಡುತ್ತಿದ್ದರು.

ಇವರು ಬರೆದಿರುವ ‘ದಿ ಸರ್ಕಲ್ ಆಫ್ ರೀಸನ್’, ‘ದಿ ಶ್ಯಾಡೊ ಲೈನ್ಸ್’, ‘ದಿ ಕೊಲ್ಕತ್ತಾ ಕ್ರೋಮೋಸೋಮ್’, ‘ರಿವರ್ ಆಫ್ ಸ್ಮೋಕ್’, ‘ದಿ ಗ್ಲಾಸ್ ಪ್ಯಾಲೆಸ್’ ಸೇರಿದಂತೆ ಮುಂತಾದ ಕಾದಂಬರಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆಗಳಿಸಿದೆ. ಹಾಗೆಯೇ ಇವರ ‘ಸೀ ಆಫ್ ಪೊಪ್ಪೀಸ್’, ‘ರಿವರ್ ಆಫ್ ಸ್ಮೋಕ್’ ಕೃತಿಗಳು 2008 ಮತ್ತು 2012 ನೇ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದವು.

ದೆಹಲಿ, ಆಕ್ಸಫರ್ಡ್ ಮತ್ತು ಅಲೆಕ್ಸಾಂಡ್ರಿಯಾದಲ್ಲಿ ಅಧ್ಯಯನ ಮಾಡಿರುವ ಘೋಷ್​ ಅವರು ಭಾರತವಲ್ಲದೆ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲೂ ಕೆಲ ವರ್ಷಗಳ ಕಾಲ ನೆಲೆಸಿದ್ದರು. ಇಂಗ್ಲಿಷ್ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಸಲುವಾಗಿ ಈ ಹಿಂದೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಇವರನ್ನು ಗೌರವಿಸಲಾಗಿತ್ತು. 2016ರಲ್ಲಿ ‘ಟಾಟಾ ಲಿಟರೇಚರ್‌ ಲಿವ್‌’ ಜೀವಮಾನ ಸಾಧನೆ ಪ್ರಶಸ್ತಿ ಕೂಡ ಆಂಗ್ಲ ಲೇಖಕನಿಗೆ ನೀಡಲಾಗಿತ್ತು.

ಶುಕ್ರವಾರ ನಡೆದ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಮಂಡಳಿಯ ಸಭೆಯಲ್ಲಿ ಅಮಿತಾವ್​ ಘೋಷ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 1956 ರಲ್ಲಿ ಕೊಲ್ಕತ್ತಾದ ಬಂಗಾಳಿ ಹಿಂದೂ ಕಟುಂಬದಲ್ಲಿ ಜನಿಸಿದ 62 ವಯಸ್ಸಿನ ಲೇಖಕ ಸದ್ಯ ನ್ಯೂಯಾರ್ಕ್​​ನಲ್ಲಿ ಪತ್ನಿ ಡೆಬೊರಾ ಬೇಕರ್​ ಅವರೊಂದಿಗೆ ನೆಲೆಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ