ರೈತರು ಸಹಕಾರಿ ಬ್ಯಾಂಕುಗಳಲ್ಲಿ ಪಡೆದಿರುವ ಸಾಲಕ್ಕೆ ಜೂನ್ ತಿಂಗಳಿನಲ್ಲಿ ಋಣಪತ್ರ ನೀಡಲಾಗುವುದು

ಬೆಳಗಾವಿ(ಸುವರ್ಣಸೌಧ), ಡಿ.14- ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಒಂದು ಲಕ್ಷ ರೂ. ಸಾಲಕ್ಕೆ ಜೂನ್ ತಿಂಗಳ ಅಂತ್ಯದೊಳಗೆ ಎಲ್ಲರಿಗೂ ಋಣಮುಕ್ತ ಪತ್ರ ನೀಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ವಿಧಾನಪರಿಷತ್‍ನಲ್ಲಿಂದು ತಿಳಿಸಿದರು.

ಸಹಕಾರಿ ಬ್ಯಾಂಕುಗಳಲ್ಲಿ 20.38 ಲಕ್ಷ ರೈತರು ಒಂದು ಲಕ್ಷದ ವರೆಗೆ ಸಾಲವನ್ನು ಪಡೆದಿದ್ದಾರೆ.ಸುಮಾರು 9448.61 ಕೋಟಿ ಸಾಲ ಮನ್ನಾ ಮಾಡಲಾಗುವುದು.ಅರ್ಹ ರೈತರಿಗೆ ಜೂನ್ ತಿಂಗಳೊಳಗೆ ಋಣಮುಕ್ತ ಪತ್ರ ನೀಡಲಿದ್ದೇವೆ.ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಸಚಿವರು ಸ್ಪಷ್ಟಪಡಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಋಣಮುಕ್ತ ಪತ್ರ ನೀಡಲು ರೈತರಿಗೆ ಯಾವುದೇ ರೀತಿಯ ಷರತ್ತುಗಳನ್ನು ವಿಧಿಸಿಲ್ಲ. ನೋಡಲ್ ಅಧಿಕಾರಿಗಳು ಕೇಳುವ ಮಾಹಿತಿಯನ್ನು ಪರಿಶೀಲಿಸಿದರೆ ಸಾಕು ಅರ್ಹ ರೈತರ ಸಾಲ ಮನ್ನಾ ಮಾಡಲಾಗುವುದು ಎಂದರು.

ಸಹಕಾರಿ ಬ್ಯಾಂಕುಗಳಲ್ಲಿ 10-07-2018ಕ್ಕೆ ಅನ್ವಯವಾಗುವಂತೆ ಒಂದು ಲಕ್ಷದವರೆಗೆ ಸಾಲ ಮನ್ನಾ ಮಾಡಲು ಸರ್ಕಾರ ತೀರ್ಮಾನಿಸಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಹಾಗೂ ಬ್ಯಾಂಕ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.
ಡಿಸಿಸಿ ಬ್ಯಾಂಕ್‍ನ ಶಾಖೆಗಳು, ಫಿಕಾರ್ಡ್‍ಗಳಲ್ಲಿ ರೈತರು ಸಾಲ ಪಡೆದಿರಬೇಕು.ರೈತರ ಬೆಳೆ ಸಾಲ ಪಡೆದಿದ್ದರೆ ಒಂದೂವರೆ ಲಕ್ಷ ರೂ.ವರೆಗಿನ ಸಾಲ ಮನ್ನವಾಗಲಿದೆ. ಕುಟುಂಬದ ಸದಸ್ಯರು 20ಸಾವಿರಕ್ಕಿಂತ ಹೆಚ್ಚಿನ ವೇತನ, ಪಿಂಚಣಿ ಪಡೆಯುತ್ತಿದ್ದಲ್ಲಿ, ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸಿದಂಥವರಿಗೆ ಈ ಸೌಲಭ್ಯ ದೊರೆಯುವುದಿಲ್ಲ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಡಿಸಿಸಿ ಬ್ಯಾಂಕುಗಳು, ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ರೈತರು ಪಡೆದ ಬೆಳೆ ಸಾಲ ಮನ್ನಾವಾಗಲಿದೆ.ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದಿರುವ ಬೆಳೆ ಸಾಲವನ್ನು ಮನ್ನಾ ಮಾಡಲಾಗುವುದು.ಯಾವ ಯಾವ ಬ್ಯಾಂಕುಗಳಲ್ಲಿ ರೈತರು ಎಷ್ಟು ಸಾಲ ಪಡೆದಿದ್ದಾರೆ ಎಂಬುದರ ಸಂಕ್ಷಿಪ್ತ ವಿವರ ಬಂದ ನಂತರ ಸಾಲ ಮನ್ನ ಮಾಡಲಾಗುವುದು.

ಫಿಕಾರ್ಡ್ ಬ್ಯಾಂಕ್‍ನಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಪ್ರತಿ ಪಕ್ಷ ಬಿಜೆಪಿ ಶಾಸಕರು ಒತ್ತಾಯಿಸಿದರು.ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು.

ಸಾಲ ಮನ್ನಾ ಮಾಡುವಂತೆ ನಮ್ಮ ಮುಂದೆ ನಮಗೆ ಹೇಳುವ ನೀವು ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ.ಅಲ್ಲಿ ಏಕೆ ಒತ್ತಡ ಹಾಕಬಾರದು ಎಂದು ಆಡಳಿತ ಪಕ್ಷದ ಸದಸ್ಯರು ಪ್ರಶ್ನಿಸಿದರು.

ಇದುವರೆಗೂ ನೀವು ಕೇವಲ 50 ಕೋಟಿ ಸಾಲ ಮನ್ನ ಮಾಡಿ ಬೆರಳೆಣಿಕೆ ಸಂಖ್ಯೆಯ ರೈತರಿಗೆ ಋಣಮುಕ್ತ ಪತ್ರ ನೀಡಿದ್ದೀರಿ.ಸಾಲ ಮನ್ನ ಮಾಡದ ಕಾರಣ ಹೊಸದಾಗಿ ಯಾವುದೇ ಬ್ಯಾಂಕುಗಳು ಸಾಲ ನೀಡುತ್ತಿಲ್ಲ. ಬದಲಿಗೆ ನೋಟಿಸ್ ಕೂಡ ನೀಡಲಾಗುತ್ತಿದೆ.ಇದೊಂದು ಪ್ರಚಾರದ ಗಿಮಿಕ್ ಎಂದು ಟೀಕಿಸಿದರು.
ಈ ಹಂತದಲ್ಲಿ ಬಂಡೆಪ್ಪ ಕಾಶಂಪುರ, ಕರ್ನಾಟಕದ ಈ ಯೋಜನೆಯನ್ನು ದೇಶವೇ ಎದುರು ನೋಡುತ್ತದೆ.ಪ್ರತಿ ತಿಂಗಳು ಹಂತ ಹಂತವಾಗಿ ಋಣಮುಕ್ತ ಪತ್ರ ನೀಡುತ್ತೇವೆ. ಹಂತ ಹಂತವಾಗಿ ಸಹಕಾರಿ ಬ್ಯಾಂಕುಗಳಿಗೆ ಹಣ ಪಾವತಿಸಲಾಗುವುದು.ಪ್ರತಿ ಪಕ್ಷಗಳು ಅನಗತ್ಯವಾಗಿ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ