ಇಂದು ಅಂಗೀಕಾರವಾದ ಕರ್ನಾಟಕ ಸರಕು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ

ಬೆಳಗಾವಿ ಡಿ.14: ಕರ್ನಾಟಕ ಸರಕು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ 2018 ವಿಧಾನ ಸಭೆಯಲ್ಲಿಂದು ಸರ್ವಾನುಮತದಿಂದ ಇಂದು ಅಂಗೀಕಾರವಾಗಿತು.ಹಣಕಾಸು ಹೊಂದಿರುವ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ 2018ನೇ ಸಾಲಿನ ಕರ್ನಾಟಕ ಸರಕು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ ಮಂಡಿಸಿ ಉದ್ದೇಶವನ್ನು ಸದನಕ್ಕೆ ವಿವರಿಸಿದರು.ಕೇಂದ್ರ ಸರ್ಕಾರ ಸರಕು ಸೇವೆ ತೆರಿಗೆ ಅಧಿನಿಯಮ 2017ನ್ನು ಕೇಂದ್ರ ಸರಕುಗಳ ಮತ್ತು ಸೇವೆಗಳ ತೆರಿಗೆ ಅಧಿನಿಯಮ 2018ರ ಮೂಲಕ ತಿದ್ದುಪಡಿ ಮಾಡಿದೆ.

ಸರಕು ಮತ್ತು ಸೇವಗಳ ತೆರಿಗೆ ಏಕರೂಪದ ತೆರಿಗೆ ವ್ಯವಸ್ಥೆಯಾಗಿರುವುದರಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸರಕುಗಳ ಮತ್ತು ಸೇವಾ ತೆರಿಗೆ ಪರಿಷತ್ತಿನ ಶಿಫಾರಸ್ಸುಗಳ ಅನುಸಾರ ಸಂಬಂಧಿಸಿದ ಸರಕುಗಳ ಮತ್ತು ಸೇವಗಳ ತೆರಿಗೆಗೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕುಮಾರಸ್ವಾಮಿ ಸನದಕ್ಕೆ ವಿವರಿಸಿದರು.ಹೊಸ ಪಾವತಿ ವಿಧಾನವನ್ನು(ಹೊಸ ರಿಟರ್ನ ) ಸಲ್ಲಿಕೆ ಕ್ರಮವನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಕರ್ನಾಟಕ ಸರಕು ಸೇವೆ ತೆರಿಗೆ ಅಧಿನಿಯಮಕ್ಕೆ ತಿದ್ದುಪಡಿ ಅವಶ್ಯವಿರುವುದರಿಂದ ಈ ಮೊದಲು ತುರ್ತು ಸ್ವರೂಪವಾಗಿದ್ದ ಸುಗ್ರೀವಾಜ್ಞೆಯನ್ನು ಬದಲಾಯಿಸಿ ತಿದ್ದುಪಡಿ ಮಸೂದೆಗೆ ಸದನ ಅನುಮತಿ ನೀಡಬೇಕೆಂದ ಮನವಿ ಮಾಡಿದರು.

ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ,ಜೆ.ಸಿ.ಮಾಧುಸ್ವಾಮಿ, ಪಿ.ರಾಜೀವ್,ಗೋವಿಂದ ಕಾರಜೋಳ,ಅರಗ ಜ್ಞಾನೇಂದ್ರ ಸೇರಿದಂತೆ ಅನೇಕ ಶಾಸಕರು ವಿಧೇಯಕ ಕ್ರಮಕ್ಕೆ ಸ್ವಾಗತಿಸಿ,ಹಲವು ಸಲಹೆ ಸೂಚನೆಯನ್ನು ನೀಡಿದರು.ಸಭಾಧ್ಯಕ್ಷ ಪೀಠದಲ್ಲಿದ್ದ ಉಪಾಧ್ಯಕ್ಷ ಕೃಷ್ಣಾರೆಡ್ಡಿ ವಿಧೇಯಕವನ್ನು ಮತಕ್ಕೆ ಹಾಕಿದಾಗ ವಿಧೇಯಕ ಸರ್ವಾನುಮತದಿಂದ ಅಂಗೀಕಾರವಾಯಿತೆಂದು ಪ್ರಕಟಿಸಿದರು.

ನಂತರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ತರುವ ದೃಷ್ಟಿಯಿಂದ ತಂದಿರುವ ವಿಧೇಯಕಕ್ಕೆ ವಿಧಾನ ಸಭೆ ಅಂಗೀಕಾರ ನೀಡಿತು.ಮುಖ್ಯಮಂತ್ರಿ ಅವರು ವಿಧೇಯಕದ ಉದ್ದೇಶವನ್ನು ಸದನಕ್ಕೆ ವಿವರಿಸಿ ಪಾರದರ್ಶಕ ಕಾಯ್ದೆಯಲ್ಲಿ ಕೆಲವು ಸುಧಾರಣೆ ತಂದಿದ್ದು ಅದರ ನಿಯಮದಡಿ ತಿದ್ದುಪಡಿ ವಿಧೇಯಕವನ್ನು ಸದನಕ್ಕೆ ಮಂಡಿಸುತ್ತಿರುವುದಾಗಿ ತಿಳಿಸಿದರು.ಬಿಜೆಪಿಯ ಹಲವಾರು ಶಾಸಕರು ತೀವ್ರ ಆಕ್ಷೇಪ ವ್ಯೆಕ್ತಪಡಿಸಿದರು.ಸರ್ಕಾರ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದ ಹಿನ್ನಲೆಯಲ್ಲಿ ಉಪಾಧ್ಯಕ್ಷರು ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದಿಂದ ವಿಧೇಯಕಕ್ಕೆ ಅನುಮೋದನೆ ದೊರೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ