ಒಂದು ಕೇಜಿ ರಾಗಿಗೆ ಒಂದು ರೂ. ಸರಬರಾಜು ಮಾಡುವವರನ್ನು ಕರೆಸಿ ಸನ್ಮಾನ ಮಾಡೂಣ ಎಂದ ಸಿ.ಎಂ

ಬೆಳಗಾವಿ(ಸುವರ್ಣಸೌಧ), ಡಿ.14- ಒಂದು ರೂ.ಗೆ ಒಂದು ಕೆಜಿ ರಾಗಿ ಸರಬರಾಜು ಮಾಡುವವರನ್ನು ಕರೆಸಿ ಸನ್ಮಾನ ಮಾಡೋಣ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಗೆ ತಿಳಿಸಿದರು.

ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಮಾಡಿದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಒಂದು ರೂ.ಗೆ ಒಂದು ಕೆಜಿಯಂತೆ ರಾಗಿ ಕೊಡಲು ಸಾಧ್ಯವಿಲ್ಲ. ಹಾಸ್ಟೆಲ್‍ಗಳಿಗೆ ಒಂದು ಕೆಜಿಗೆ ಒಂದು ರೂ.ನಂತೆ ಸರಬರಾಜು ಮಾಡಲು ಟೆಂಡರ್‍ನಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಕರೆಸಿ ಸನ್ಮಾನ ಮಾಡೋಣ. ಈ ರೀತಿ ಅಗ್ಗದ ದರ ಟೆಂಡರ್‍ನಲ್ಲಿ ನಮೂದಿಸಿ ದಾರಿ ತಪ್ಪಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋಣ ಎಂದು ಹೇಳಿ ಕರ್ನಾಟಕ ಪಾರದರ್ಶಕ ಕಾಯ್ದೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸುವ ಭರವಸೆ ನೀಡಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಕುಮಾರ್‍ಬಂಗಾರಪ್ಪ, ಒಂದು ರೂ.ಗೆ ಒಂದು ಕೆಜಿ ರಾಗಿ, 10ರೂ.ಗೆ ಒಂದು ಕೆಜಿ ಅಕ್ಕಿ ಸೇರಿದಂತೆ ಕಡಿಮೆ ದರದಲ್ಲಿ ಆಹಾರ ಸರಬರಾಜು ಮಾಡುವುದಾಗಿ ಟೆಂಡರ್‍ನಲ್ಲಿ ನಮೂದಿಸಿರುವ ವಿಚಾರ ಬೆಳಕಿಗೆ ಬಂದಿದೆ. ಹಾಸ್ಟೇಲ್‍ಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ ಎಂದು ಸದನದ ಗಮನ ಸೆಳೆದದ್ದು, ಗಂಭೀರ ಚರ್ಚೆಗೆ ಎಡೆ ಮಾಡಿಕೊಟ್ಟಿತು.

ಬಿಜೆಪಿ ಶಾಸಕ ಮಾಧುಸ್ವಾಮಿ ಮಾತನಾಡಿ, ಟೆಂಡರ್‍ನಲ್ಲಿ ಶೇ.40ರಷ್ಟು ಕಡಿಮೆ ನಮೂದು ಮಾಡುತ್ತಾರೆ.ಈ ರೀತಿ 8 ಜಿಲ್ಲೆಗೆ ಆಹಾರ ಪದಾರ್ಥ ಸರಬರಾಜು ಮಾಡುವ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

ಇದಕ್ಕೆ ಧನಿ ಗೂಡಿಸಿದ ಬಿಜೆಪಿಯ ಮತ್ತೊಬ್ಬ ಶಾಸಕ ಅರಗ ಜ್ಞಾನೇಂದ್ರ ಅವರು, ಶಿವಮೊಗ್ಗ ಜಿಲ್ಲೆಯ ಹಾಸ್ಟೇಲ್‍ಗಳಿಗೆ 10 ವರ್ಷದಿಂದಲೂ ಆಹಾರ ಧಾನ್ಯ ಸರಬರಾಜು ಮಾಡಲಾಗುತ್ತಿದೆ ಎಂದರು.

ಆಗ ಮಧ್ಯ ಪ್ರವೇಶಿಸಿದ ಸ್ಪೀಕರ್, ಆಹಾರ ಪೂರೈಕೆಯಲ್ಲಿ ಮಾತ್ರವಲ್ಲ. ಬಹುತೇಕ ಇಲಾಖೆಗಳಲ್ಲೂ ಇದೇ ರೀತಿ ಕಡಿಮೆ ದರದಲ್ಲಿ ಟೆಂಡರ್‍ನಲ್ಲಿ ನಮೂದು ಮಾಡಿ ಪಾರದರ್ಶಕ ಕಾಯ್ದೆ ದುರುಪಯೋಗವಾಗುತ್ತಿದೆ.

ಅಧಿಕಾರಿಗಳು ಪತ್ರ ನೋಡುತ್ತಾರೆಯೇ ಹೊರತು ವಾಸ್ತವ ಅರಿಯುತ್ತಿಲ್ಲ , ಗುಣಮಟ್ಟದ ಪರಿಶೀಲನೆ ಆಗಬೇಕು. ಕಳಪೆ ಆಹಾರ ಪೂರೈಸುವವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.ಶಿವಮೊಗ್ಗ ಎಂದಾಕ್ಷಣ ಕಡಿದಾಳ್ ಮಂಜಪ್ಪ ಹಾಗೂ ಗೋಪಾಲ್‍ಗೌಡರು ನೆನಪಿಗೆ ಬರುತ್ತಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇಡೀ ರಾಜ್ಯಕ್ಕೆ ಆಹಾರ ಪೂರೈಸುವ ಪ್ಯಾಕೇಜ್ ನೀಡುವ ವಿಚಾರ ಪ್ರಸ್ತಾವವಾಗಿದೆ.ಒಟ್ಟೊಟ್ಟಿಗೆ ಲೂಟಿಗೆ ಸರ್ಕಾರ ಬೆಂಬಲ ಕೊಡುತ್ತಿದೆಯೇ ಎಂದು ಪ್ರಶ್ನಿಸಿದರು.

ಆಗ ಪ್ರಿಯಾಂಕ ಖರ್ಗೆ ಮಾತನಾಡಿ, ಹಿಂದುಳಿದವರ್ಗಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳಿಗೆ ಆಹಾರ ಪೂರೈಸಲಾಗುತ್ತಿರುವ ವಿಚಾರದಲ್ಲಿ ನಿವೃತ್ತ ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಇತ್ತೀಚೆಗೆ ವರದಿಯನ್ನೂ ನೀಡಿದೆ. ಅಲ್ಲದೆ ಹಾಸ್ಟೆಲ್‍ಗಳ ಸುಧಾರಣೆಗೆ ಶಾಸಕರ ಸಲಹೆಗಳನ್ನು ಕೋರಲಾಗಿತ್ತು.8 ಮಂದಿ ಶಾಸಕರು ಸಲಹೆ ನೀಡಿದ್ದಾರೆ. ವಿಧಾನಸಭೆ ಸದಸ್ಯರ ಜತೆಯೂ ಚರ್ಚಿಸಿ ಸಲಹೆ ಪಡೆಯಲಾಗುವುದು, ಸಮವಸ್ತ್ರ, ಆಹಾರ, ಬ್ಯಾಗ್ ಸೇರಿದಂತೆ ಎಲ್ಲಾ ಸಾಮಗ್ರಿಗಳ ಪೂರೈಗೂ ಶಾಸಕರ ಸಲಹೆ ಹಾಗೂ ಸಮಿತಿ ನೀಡಿರುವ ವರದಿ ಆಧರಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.

ರಾಜ್ಯದಲ್ಲಿ ಎಲ್ಲೂ ಕೂಡ ಒಂದು ರೂ.ಗೆ ರಾಗಿ ಸಿಗುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಕರೆಯಲಾಗಿದ್ದ ಆಹಾರ ಸಾಮಗ್ರಿ ಪೂರೈಕೆ ಟೆಂಡರ್‍ಗೆ ಜಿಲ್ಲಾಧಿಕಾರಿಗಳು ತಡೆಯಾಜ್ಞೆ ತಂದಿದ್ದಾರೆ. ಒಂದು ಕೆಜಿ ರಾಗಿಗೆ 22ರೂ.ನಂತೆ ಖರೀದಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಆಗ ಮತ್ತೆ ಮಧ್ಯ ಪ್ರವೇಶಿಸಿದ ಸ್ಪೀಕರ್, ಒಂದು ರೂ.ಗೆ ಒಂದು ಕೆಜಿ ರಾಗಿ ಪೂರೈಸುವ ವ್ಯಕ್ತಿಗೆ ಟೆಂಡರ್ ನೀಡಿ.ಒಂದು ವೇಳೆ ಸರಬರಾಜು ಮಾಡದಿದ್ದರೆ ಕಾನೂನು ರೀತಿ ಕ್ರಮಕೈಗೊಳ್ಳಲು ಡಿಸಿಗೆ ಸೂಚನೆ ನೀಡಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ