ರಫೇಲ್ ಒಪ್ಪಂದ ವಿಚಾರವಾಗಿ ಜಂಟಿ ಸಂಸದೀಯ ಸಮಿತಿ ರಚನೆ ಮಾಡಬೇಕು: ಖರ್ಗೆ ಆಗ್ರಹ

ನವದೆಹಲಿ: ರಫೇಲ್​ ಒಪ್ಪಂದದ ವಿಚಾರವಾಗಿ ಜಂಟಿ ಸಂಸದೀಯ ಸಮಿತಿ ತನಿಖೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್​ ಹೇಳಿಲ್ಲ. ಆದ್ದರಿಂದ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಿಸಲೇಬೇಕು ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ರಫೇಲ್​ ತೀರ್ಪು ಪ್ರಕಟವಾಗುತ್ತಿದ್ದಂತೆ ಲೋಕಸಭೆಯಲ್ಲಿ ಭಾರಿ ಗದ್ದಲ-ಕೋಲಾಹಲ ಉಂಟಾಯಿತು. ಆಡಳಿತ ಪಕ್ಷದ ಮೇಲೆ ಆರೋಪ ಮಾಡಿದ ರಾಹುಲ್​ ಗಾಂಧಿ ಅವರು ಸದನದಲ್ಲೇ ಕ್ಷಮೆ ಕೋರಬೇಕು ಎಂದು ಬಿಜೆಪಿ ಒತ್ತಾಯಿಸಿತು. ಆದರೆ, ಬಿಜೆಪಿ ಒತ್ತಾಯಕ್ಕೆ ಮಣಿಯದ ಕಾಂಗ್ರೆಸ್​, ಈ ತೀರ್ಪಿನಿಂದ ಕಾಂಗ್ರೆಸ್​ನ ವಾದಕ್ಕೇನೂ ಹಿನ್ನಡೆಯಾಗಿಲ್ಲ. ರಫೇಲ್​ ಒಪ್ಪಂದದಲ್ಲಿ ನಮ್ಮ ಪ್ರಶ್ನೆ ಇರುವುದು ಬೆಲೆಯ ವಿಚಾರದಲ್ಲಿ. ಈ ವಿಚಾರ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತಿಲ್ಲವಾದ್ದರಿಂದ ಇದರ ಬಗ್ಗೆ ಕೋರ್ಟ್​ ಏನನ್ನೂ ಮಾತನಾಡುವುದಿಲ್ಲ ಎಂದಷ್ಟೇ ಸುಪ್ರೀಂ ಕೋರ್ಟ್​ ಹೇಳಿದೆ. ಹೀಗಾಗಿ ನಾವು ಹಗರಣವನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ. ನಾವು ಹಿಂದಿನಿಂದಲೂ ಕೇಳುತ್ತಿರುವುದು ಇದನ್ನೇ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ತೀರ್ಪಿನ ಕುರಿತು ಗೃಹ ಸಚಿವರು ಅರ್ಧ ಸತ್ಯವನ್ನಷ್ಟೇ ಮಾತನಾಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.

ಈ ನಡುವೆ ತೀರ್ಪಿನ ಕುರಿತು ಮಾತನಾಡಿರುವ ಕಾಂಗ್ರೆಸ್​ ಮುಖಂಡ ರಣದೀಪ್​ ಸುರ್ಜೆವಾಲ, ರಫೇಲ್​ ಹಗರಣವನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್​ ವೇದಿಕೆಯಲ್ಲ ಎಂದಷ್ಟೇ ಹೇಳಿದೆ. ನಮ್ಮ ಪ್ರಶ್ನೆ ಇರುವುದು ಒಪ್ಪಂದದ ಬೆಲೆಯ ಕುರಿತು. ಈ ಬಗ್ಗೆ ಸಂಸತ್​ನ ಜಂಟಿ ಸದನ ಸಮಿತಿ ಮಾಡಬಹುದು. ಈ ಹಗರಣದ ತನಿಖೆಗೆ ಅದೊಂದೇ ದಾರಿ ಎಂದು ಅವರು ಹೇಳಿದ್ದಾರೆ.

RafaleDeal,Mallikarjun Kharge,Joint Parliamentary Committee (JPC),

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ