ದಮನಿತರ ದನಿಯಾಗಿರುವ ಮಲ್ಲಿಕಾರ್ಜುನ ಖರ್ಗೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:ಜು-೨೦: ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಅವರ ವಿರುದ್ಧ ಒಮ್ಮೆಯೂ ಗುರುತರ ಆಪಾದನೆ ಕೇಳಿ ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಹೇಳಿದರು.
ಮಲ್ಲಿಕಾರ್ಜುನ್ ಖರ್ಗೆ ಅವರ ಹುಟ್ಟು ಹಬ್ಬದ ಅಂಗವಾಗಿ ಶುಕ್ರವಾರ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಪೊಲಿಟಿಕಲ್ ಅಡ್ವೈಸರ್’ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಖರ್ಗೆ ಅವರು ರಾಜ್ಯದ ವಿಭಿನ್ನ ನಾಯಕ. ನಾನು ಅವರನ್ನು ದಲಿತ ನಾಯಕ ಎನ್ನುವುದಿಲ್ಲ. ಎಲ್ಲ ಸಮುದಾಯಕ್ಕೂ‌ ಸಮಾನ‌ ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ನೊಂದ ಸಮುದಾಯಕ್ಕೆ ಹೆಚ್ಚು ಆಪ್ಯವಾಗಿ ನಿಂತವರು. ಇವರ ಇಡೀ
ಸರ್ವಸ್ವವನ್ನು ಸಾರ್ವಜನಿಕರ ಬದುಕಿಗೋಸ್ಕರ ಮೀಸಲಿಟ್ಟವರು. ಅವರು ನನಗೆ ಹಿರಿಯ ಸಹೋದರ, ಮಾರ್ಗದರ್ಶಕರು. ನಾನು ವಿದ್ಯಾರ್ಥಿಯಾಗಿದ್ದಾಗಲೇ ಇವರು ಸಚಿವರಾಗಿದ್ದರು. ಪರಿಶಿಷ್ಟ ಜಾತಿಯವರಿಗೆ ವಿದ್ಯಾರ್ಥಿ ವೇತನ ತಡವಾಗುತ್ತಿತ್ತು.‌ಆ ಸಂದರ್ಭದಲ್ಲಿ ಖರ್ಗೆ ಅವರು ನಮ್ಮ ಪರ ನಿಂತವರು. ನನ್ನ ತಂದೆಗೆ ಹೆಚ್ಚು ಆಪ್ತರಾಗಿದ್ದರು. ನಮ್ಮ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗೆ ೧೮ ವರ್ಷ ಅಧ್ಯಕ್ಷರಾಗಿದ್ದರು. ನಮ್ಮ ಕುಟುಂಬದ ಒಬ್ಬ ಸದಸ್ಯರಂತೆ ನಮ್ಮೊಟ್ಟಿಗೆ ಇದ್ದವರು. ಅವರು ರಾಜಕೀಯದ ತತ್ವ, ಸಿದ್ಧಾಂತಕ್ಕೆ ಅಂಟಿಕೊಂಡವರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶದ ದಾರಿಯಲ್ಲಿ ನಡೆದವರು.

ಶಿಕ್ಷಣ ಸಚಿವರಾದ ಮೇಲೆ , ದಲಿತ ಸಮುದಾಯಕ್ಕೆ ಸೇರಿದವರು ಕೂಡ ಶಿಕ್ಷಣ ಸಂಸ್ಥೆ ಮಾಡಬಹುದು ಎಂದು ಕಾನೂನು ತಂದು ಅನುದಾನವಿಟ್ಟರು. ೧೧ ಬಾರಿ ಶಾಸಕ ,೨ ಬಾರಿ ಲೋಕಸಭೆಗೆ ಗೆದ್ದಿದ್ದಾರೆ. ಒಂದು ಕ್ಷೇತ್ರದಲ್ಲಿ ಇಷ್ಟು ಬಾರಿ ಗೆಲ್ಲುವುದು ಈಗಿನ ರಾಜಕೀಯದಲ್ಲಿ‌ ಅಸಾಧ್ಯದ ಮಾತು. ಇವರು ಎಲ್ಲ ಖಾತೆ‌ಗಳ ಸಚಿವರಾಗಿ ಕೆಲಸ ನಿಭಾಯಿಸಿದ್ದಾರೆ‌ ಎಂದು ಬಣ್ಣಿಸಿದರು.‌

mallikarjun kharge,birthday,Political Advisor,Special book Release

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ