ನವದೆಹಲಿ: ರಫೇಲ್ ಒಪ್ಪಂದದ ವಿಚಾರವಾಗಿ ಜಂಟಿ ಸಂಸದೀಯ ಸಮಿತಿ ತನಿಖೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ. ಆದ್ದರಿಂದ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಿಸಲೇಬೇಕು ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ರಫೇಲ್ ತೀರ್ಪು ಪ್ರಕಟವಾಗುತ್ತಿದ್ದಂತೆ ಲೋಕಸಭೆಯಲ್ಲಿ ಭಾರಿ ಗದ್ದಲ-ಕೋಲಾಹಲ ಉಂಟಾಯಿತು. ಆಡಳಿತ ಪಕ್ಷದ ಮೇಲೆ ಆರೋಪ ಮಾಡಿದ ರಾಹುಲ್ ಗಾಂಧಿ ಅವರು ಸದನದಲ್ಲೇ ಕ್ಷಮೆ ಕೋರಬೇಕು ಎಂದು ಬಿಜೆಪಿ ಒತ್ತಾಯಿಸಿತು. ಆದರೆ, ಬಿಜೆಪಿ ಒತ್ತಾಯಕ್ಕೆ ಮಣಿಯದ ಕಾಂಗ್ರೆಸ್, ಈ ತೀರ್ಪಿನಿಂದ ಕಾಂಗ್ರೆಸ್ನ ವಾದಕ್ಕೇನೂ ಹಿನ್ನಡೆಯಾಗಿಲ್ಲ. ರಫೇಲ್ ಒಪ್ಪಂದದಲ್ಲಿ ನಮ್ಮ ಪ್ರಶ್ನೆ ಇರುವುದು ಬೆಲೆಯ ವಿಚಾರದಲ್ಲಿ. ಈ ವಿಚಾರ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತಿಲ್ಲವಾದ್ದರಿಂದ ಇದರ ಬಗ್ಗೆ ಕೋರ್ಟ್ ಏನನ್ನೂ ಮಾತನಾಡುವುದಿಲ್ಲ ಎಂದಷ್ಟೇ ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ನಾವು ಹಗರಣವನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ. ನಾವು ಹಿಂದಿನಿಂದಲೂ ಕೇಳುತ್ತಿರುವುದು ಇದನ್ನೇ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ತೀರ್ಪಿನ ಕುರಿತು ಗೃಹ ಸಚಿವರು ಅರ್ಧ ಸತ್ಯವನ್ನಷ್ಟೇ ಮಾತನಾಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.
ಈ ನಡುವೆ ತೀರ್ಪಿನ ಕುರಿತು ಮಾತನಾಡಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲ, ರಫೇಲ್ ಹಗರಣವನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ವೇದಿಕೆಯಲ್ಲ ಎಂದಷ್ಟೇ ಹೇಳಿದೆ. ನಮ್ಮ ಪ್ರಶ್ನೆ ಇರುವುದು ಒಪ್ಪಂದದ ಬೆಲೆಯ ಕುರಿತು. ಈ ಬಗ್ಗೆ ಸಂಸತ್ನ ಜಂಟಿ ಸದನ ಸಮಿತಿ ಮಾಡಬಹುದು. ಈ ಹಗರಣದ ತನಿಖೆಗೆ ಅದೊಂದೇ ದಾರಿ ಎಂದು ಅವರು ಹೇಳಿದ್ದಾರೆ.
RafaleDeal,Mallikarjun Kharge,Joint Parliamentary Committee (JPC),