3 ರಿಂದ 6 ವರ್ಷದ ಮಕ್ಕಳಿಗೆ ಸಮವಸ್ತ್ರ, ಮುಂಬರುವ ಬಜೆಟ್ ನಲ್ಲಿ ಕ್ರಮ : ಸಚಿವೆ ಡಾ.ಜಯಮಾಲ

ಬೆಳಗಾವಿ ,ಡಿ.13-ಶಾಲಾ ಮಕ್ಕಳಿಗೆ ನೀಡುವ ಮಾದರಿಯಲ್ಲೇ ಪೂರ್ವ ಪ್ರಾಥಮಿಕದ 3ರಿಂದ 6 ವರ್ಷದ ಮಕ್ಕಳಿಗೆ ಸಮವಸ್ತ್ರವನ್ನು ನೀಡುವ ಬಗ್ಗೆ ಮುಂಬರುವ ಬಜೆಟ್‍ನಲ್ಲಿ ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ.ಜಯಮಾಲ ಪರಿಷತ್‍ನಲ್ಲಿಂದು ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಎಸ್.ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೂರರಿಂದ 6 ವರ್ಷದೊಳಗಿನ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಣೆ ಮಾಡುವ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ.

ಮುಂಬರುವ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಶಿಶುವಿಹಾರದಲ್ಲೂ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡುವುದರಿಂದ ಮಕ್ಕಳಲ್ಲಿ ನಾವೆಲ್ಲರೂ ಸಮಾನರು ಎಂಬ ಮನೋಭಾವನೆ ಬೆಳೆಯುತ್ತದೆ. ಮಲೆನಾಡು, ಕರಾವಳಿ ತೀರಾ ಪ್ರದೇಶ, ಗುಡ್ಡಗಾಡು ಪ್ರದೇಶ ಸೇರಿದಂತೆ ಮತ್ತಿತರ ಕಡೆ ಗರ್ಭಿಣಿಯರಿಗೆ ಮಾತೃಪೂರ್ಣ ಯೋಜನೆಯಡಿ ನೀಡುತ್ತಿರುವ ಕಿಟ್‍ನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಅಂಗನವಾಡಿ ಕೇಂದ್ರಗಳಿಗೆ ಗರ್ಭಿಣಿಯರು ಬರಲಾಗದಿದ್ದರೂ ಅವರು ಬರಬೇಕಾದ ಅಗತ್ಯವಿಲ್ಲ. ಕಿಟ್‍ನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ