ಅನಧಿಕೃತ ಮದ್ಯಪಾನ ಮಾರಾಟ ಮಾಡಿದರೆ ಕಾನೂನಿನ ಪ್ರಕಾರ ಕ್ರಮ, ಸಿ.ಎಂ

ಬೆಳಗಾವಿ,ಡಿ.13- ರಾಜ್ಯದ ಯಾವುದೇ ಭಾಗದಲ್ಲೂ ಅನಧಿಕೃತವಾಗಿ ಮದ್ಯಪಾನ ಮಾರಾಟ ಮಾಡುವುದು ಸರ್ಕಾರದ ಗಮನಕ್ಕೆ ಬಂದರೆ ತಕ್ಷಣವೇ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಅಬಕಾರಿ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯೆ ತೇಜಸ್ವಿನಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಎಲ್ಲಿಯೂ ಅನಧಿಕೃತವಾಗಿ ಮದ್ಯ ಮಾರಾಟವಾಗುತ್ತಿಲ್ಲ. ಸರ್ಕಾರ ಇದಕ್ಕೆ ಅವಕಾಶವನ್ನು ನೀಡುವುದಿಲ್ಲ. ಒಂದು ವೇಳೆ ಎಲ್ಲಾದರೂ ಮಾರಾಟ ಮಾಡುತ್ತಿರುವ ಬಗ್ಗೆ ಸರ್ಕಾರಕ್ಕೆ ಗಮನಕ್ಕೆ ತಂದರೆ ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಕೆಲವು ಕಡೆ ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.ಇಂತಹ ಕಡೆ ದಾಳಿ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡದ್ದೇವೆ. ನಿರ್ಧಿಷ್ಟ ಪ್ರಕರಣದ ಬಗ್ಗೆ ಮಾಹಿತಿ ನೀಡಿದರೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಣ್ಣಪುಟ್ಟ ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಕದ್ದುಮುಚ್ಚಿ ಮಾರಾಟ ಮಾಡುತ್ತಾರೆ. ಇಂತಹ ಕಡೆ ನಮ್ಮ ಅಬಕಾರಿ ಇಲಾಖೆ ಅಧಿಕಾರಿಗಳು ಆಗಾಗ್ಗೆ ದಾಳಿ ನಡೆಸಿ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಿದ್ದಾರೆ ಎಂದರು.

1957ರ ನಿಯಮ 5ನ್ನು ಉಲ್ಲಂಘಿಸಿ ದೇವಸ್ಥಾನ, ಶಾಲಾಕಾಲೇಜುಗಳ 100 ಮೀಟರ್ ಅಂತರದಲ್ಲಿ ಮದ್ಯ ಮಾರಾಟ ಅಂಗಡಿ ತೆರೆಯುವಂತಿಲ್ಲ. 18 ವರ್ಷದೊಳಗಿನ ಮಕ್ಕಳಿಗೆ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ. ಸರ್ಕಾರ ಮದ್ಯಪಾನ ಮಾರಾಟಕ್ಕೆ ಎಲ್ಲಿಯೂ ಪೆÇ್ರೀ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಮದ್ಯಪಾನ ಸಂಯಮ ಮಂಡಳಿ ಮೂಲಕ ಮದ್ಯಪಾನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವಂತಹ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಗ್ರಾಮಾಂತರ, ನಗರ ಪ್ರದೇಶಗಳು, ಶೈಕ್ಷಣಿಕ ಪ್ರದೇಶಗಳು, ಬಯಲು ರಂಗಮಂದಿರ ಸೇರಿದಂತೆ ಅನೇಕ ಆಗಾಗ್ಗೆ ಶಿಬಿರಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಇಲಾಖೆ ಮೂಲಕ ಸಮನ್ವಯ ಸಾಧಿಸಲಾಗುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ