ಮನಪ್ಪಾಡಿ ವರದಿ ಅನಷ್ಠಾನ, ನ್ಯಾಯಾಲಯದ ಆದೇಶ ಪ್ರತಿ ಬಂದ ನಂತರ ಕ್ರಮ : ಸಿ.ಎಂ. ಕುಮಾರಸ್ವಾಮಿ

ಬೆಳಗಾವಿ,ಡಿ.13-ರಾಜ್ಯದ ವಿವಿಧೆಡೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಆಸ್ತಿಗಳನ್ನು ಭೂ ಕಬಳಿಕೆಗೆ ಸಂಬಂಧಿಸಿದಂತೆ ಮನಪ್ಪಾಡಿ ವರದಿಯನ್ನು ಅನುಷ್ಠಾನ ಮಾಡುವ ಸಂಬಂಧ ನ್ಯಾಯಾಲಯದ ಆದೇಶ ಪ್ರತಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ವಿಧಾನಪರಿಷತ್‍ನಲ್ಲಿಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಕೋರ್ಟ್‍ನ ಆದೇಶದ ಪ್ರತಿ ಈವರೆಗೂ ಸರ್ಕಾರಕ್ಕೆ ಬಂದಿಲ್ಲ. ಇದರ ಪ್ರತಿ ಬರುತ್ತಿದ್ದಂತೆ ಅಧ್ಯಯನ ನಡೆಸಿ ನ್ಯಾಯಾಲಯ ನೀಡಿರುವ ತೀರ್ಪಿನಂತೆಯೇ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಯಾರೊಬ್ಬರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಎಚ್‍ಡಿಕೆ ಹೇಳಿದರು.

ಇದಕ್ಕೂ ಮುನ್ನ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಪರಿಷತ್ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ವಿಷಯ ಪ್ರಸ್ತಾಪಿಸಿ ನ್ಯಾಯಾಲಯದ ಆದೇಶದಂತೆ ಮಾನಪ್ಪಾಡಿ ವರದಿಯನ್ನು ಅನುಷ್ಠಾನ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಮೊದಲು ಪ್ರಶ್ನೋತ್ತರ ಅವಧಿ ಮುಗಿಯಲಿ ನಂತರ ಇದರ ಬಗ್ಗೆ ಗಮನಹರಿಸುವುದಾಗಿ ಹೇಳಿದರು.

ಇದರಿಂದ ಕೆರಳಿದ ಪ್ರತಿಪಕ್ಷದ ಸದಸ್ಯರು ವರದಿಯನ್ನು ಅನುಷ್ಠಾನ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು. ಅತ್ತ ಆಡಳಿತ ಪಕ್ಷದ ಸದಸ್ಯರಿಂದ ಈಗಾಗಲೇ ಸಭಾಪತಿಗಳು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ.ಪುನಃ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿಗಳು ಉತ್ತರ ನೀಡಿದ ಬಳಿಕ ಚರ್ಚೆಗೆ ತೆರೆ ಬಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ