ಬೆಳಗಾವಿ(ಸುವರ್ಣಸೌಧ), ಡಿ.13- ಇತ್ತೀಚೆಗೆ ನಡೆದ ವಿಧಾನಸಭೆ, ಲೋಕಸಭೆ ಉಪ ಚುನಾವಣೆ ವೆಚ್ಚ, ಮೈಸೂರು ದಸರಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಿಗೆ ಅನುದಾನ, ಶಾಸಕರ ಕಾರು ಖರೀದಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಸುಮಾರು 6980.88 ಕೋಟಿ ರೂ.ಗಳ ಪೂರಕ ಅಂದಾಜನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಆರ್ಥಿಕ ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬದಲಾಗಿ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಮಂಡಿಸಿದರು.
15ನೇ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರಿಗೆ ಕಾರು ಖರೀದಿಸುವ ಸಲುವಾಗಿ ನೀಡುವ ಮುಂಗಡಕ್ಕಾಗಿ 31ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು ವೆಚ್ಚ 37.5ಕೋಟಿ ಅಂದಾಜಿಸಲಾಗಿದೆ. ಲೋಕಸಭೆ ಮತ್ತು ವಿಧಾನಸಭೆ ಐದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗೆ ಒಟ್ಟು 39 ಕೋಟಿ ಖರ್ಚಾಗಿದ್ದು, ಅದನ್ನು ರಾಜ್ಯ ಸರ್ಕಾರ ಭರಿಸಿದೆ.
ಇನ್ನು ಬೆಳಗಾವಿಯ ಅಧಿವೇಶನಕ್ಕಾಗಿ 35 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ.ಸ್ಮಾರ್ಟ್ ಪೆÇಲೀಸಿಂಗ್ಗಾಗಿ 329 ಕೋಟಿ ಒದಗಿಸಲಾಗಿದೆ.ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ಕುಡಿಯುವ ನೀರಿನ ಯೋಜನೆಯ ಟಾಸ್ಕ್ಪೆÇೀರ್ಸ್ ಕಾಮಗಾರಿಗಾಗಿ 500ಕೋಟಿ, ಗ್ರಾಮೀಣ ಕುಡಿಯುವ ಯೋಜನೆಗೆ ಒಂದು ಸಾವಿರ ಕೋಟಿ, ಗ್ರಾಮೀಣ ರಸ್ತೆ ಅಭಿವೃದ್ಧಿ ಮತ್ತು ದುರಸ್ತಿಗೆ 3500 ಕೋಟಿ ಅನುದಾನ ಒದಗಿಸುವುದಾಗಿ ಹೇಳಿದೆ.
84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸುಮಾರು 60 ಕೋಟಿ ರೂ. ಅನುದಾನವನ್ನು, ಇತ್ತೀಚೆಗೆ ನಡೆದ ಮೈಸೂರು ದಸಾರಕ್ಕಾಗಿ 120 ಕೋಟಿ ಅನುದಾನವನ್ನು ಖರ್ಚಾಗುವುದಾಗಿ ಹೇಳಲಾಗಿದೆ.
ರಾಜ್ಯ ಸರ್ಕಾರ 2018-19ನೇ ಸಾಲಿನಲ್ಲಿ ಸಹಕಾರಿ ಸಂಘಗಳು, ಬ್ಯಾಂಕುಗಳಿಗೆ 8ಸಾವಿರ ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಬಿಡುಗಡೆ ಮಾಡಲಾಗಿತ್ತು. ಅದನ್ನು ಅನುದಾನ ಎಂದು ಪರಿಗಣಿಸಲಾಗಿದೆ.ಇದಕ್ಕೆ 18 ಸಾವಿರ ಕೋಟಿ ರೂ.ಗಳನ್ನು ಸೇರಿಸಿ ಒಟ್ಟು 26ಸಾವಿರ ಕೋಟಿ ರೂ.ಗಳನ್ನು ಸಾಲ ಮನ್ನಾಕ್ಕಾಗಿ ನೀಡುವುದಾಗಿ ತಿಳಿಸಲಾಗಿದೆ.
ಒಟ್ಟು ಸಾಲ ಮನ್ನಾಕ್ಕಾಗಿ 40ಸಾವಿರ ಕೋಟಿ ಅಗತ್ಯವಿದೆ ಎಂದು ಪೂರಕ ಅಂದಾಜಿನಲ್ಲಿ ವಿವರಿಸಲಾಗಿದೆ.