ತುಮಕೂರು ಜಿಲ್ಲೆಯ ಕೆರೆಗಳಿಗೆ ಹೇಮಾವತಿ ನದಿ ನೀರು, ಶಾಸಕರೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು, ಸಚಿವ ಡಿ.ಕೆ.ಶಿವಕುಮಾರ್

ಬೆಳಗಾವಿ(ಸುವರ್ಣಸೌಧ), ಡಿ.13- ಹೇಮಾವತಿ ನದಿಪಾತ್ರದಿಂದ ತುಮಕೂರು ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲು ಇರುವ ಸಮಸ್ಯೆಯನ್ನು ಆ ಜಿಲ್ಲೆಯ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಪರಿಹರಿಸುವ ಭರವಸೆಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ತಿಳಿಸಿದರು.

ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಮಾಧುಸ್ವಾಮಿ ಪ್ರಸ್ತಾಪ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಸಂಬಂಧಪಟ್ಟ ಶಾಸಕರೊಂದಿಗೆ ಚರ್ಚೆ ನಡೆಸಲಾಗಿದೆ.ತುಮಕೂರು ಜಿಲ್ಲೆಗೆ ನೀರು ಹರಿಸುವ ವಿಚಾರದಲ್ಲಿ ಆ ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಧುಸ್ವಾಮಿ, ತುಮಕೂರು ಜಿಲ್ಲೆಗೆ ಹೇಮಾವತಿಯಿಂದ 24 ಟಿಎಂಸಿ ನೀರು ಬರಲಿದೆ ಎಂಬ ಆಶಾಭಾವನೆ ಇದ್ದು, ಆದರೆ, ಪ್ರವಾಸ ಬಂದಂತ್ತ ಸಂದರ್ಭದಲ್ಲಿ ಸ್ವಲ್ಪ ನೀರು ಬಿಟ್ಟು ನಿಲ್ಲಿಸಲಾಗಿದೆ. 15-20 ದಿನಗಳಿಂದ ನೀರು ಬಿಟ್ಟಿಲ್ಲ. ಜಿಲ್ಲೆಯ ಸಚಿವರು, ಶಾಸಕರಿಗೆ ನೀರು ಬಿಡುವುದನ್ನು ಹೇಳುವುದಿಲ್ಲ. ನಿಲ್ಲಿಸುವುದನ್ನೂ ಹೇಳುವುದಿಲ್ಲ. ನೀರಾವರಿ ಸಲಹಾ ಸಮಿತಿಯನ್ನು ಸಂಬಂಧಪಟ್ಟ ಎರಡೂ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಯವರಿಗೆ ವಹಿಸುವುದ ಸೂಕ್ತವೇನೋ ಎಂದರು.

ಹಾಸನವರಿಂದ ಬದುಕಲು ಆಗುವುದಿಲ್ಲ ಎನ್ನುತ್ತಿದ್ದಂತೆ ಆಕ್ಷೇಪ ವೆತ್ತಿದ ಜೆಡಿಎಸ್‍ನ ಕೆ.ಎಂ.ಶಿವಲಿಂಗೇಗೌಡ, ಹಾಸನದವರ ಮೇಲೆ ಆರೋಪಿಸಬೇಡಿ, ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಆಗ ಮಾತು ಮುಂದುವರೆಸಿದ ಮಾಧುಸ್ವಾಮಿ, ಅರಸೀಕೆರೆ ತಾಲ್ಲೂಕಿನವರಿಗೂ ಹೇಮವಾತಿ ನೀರಿನ ವಿಚಾರದಲ್ಲಿ ಅನ್ಯಾಯವಾಗಿದೆ.ಅವರು ಹೇಳಿಕೊಳ್ಳಲು ಆಗುವುದಿಲ್ಲ ಎಂದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಹೇಮಾವತಿ ನೀರಿಗಾಗಿ ತುಮಕೂರು ಜಿಲ್ಲೆಯಲ್ಲಿ ಹೋರಾಟ, ಸತ್ಯಾಗ್ರಹ ಎಲ್ಲವನ್ನೂ ನಡೆಸಲಾಗಿದೆ.ಕೆರೆ, ಕಟ್ಟೆಗೆ ನೀರು ತುಂಬಿಸಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸದನದಲ್ಲಿ ಕಾರ್ಯಕಲಾಪಕ್ಕೆ ಅಡ್ಡಿಪಡಿಸಬಾರದು ಎಂದು ನಾವು ತೀರ್ಮಾನಿಸಿದ್ದೇವೆ ಎಂದರು.

ಬಿಜೆಪಿ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸ್ಥಾನವನ್ನು ಆಯಾ ಜಿಲ್ಲೆಯ ಉಸ್ತುವಾರಿ ಸಚಿವರ ಬದಲಾಗಿ ಬೇರೆಯವರಿಗೆ ನೀಡುವುದು ಸೂಕ್ತ ಎಂಬ ಸಲಹೆ ನೀಡಿದರು.

ತುಮಕೂರು ಜಿಲ್ಲೆಯ ಹಲವು ಶಾಸಕರು ಹೇಮಾವತಿ ನೀರು ಹರಿಸುವಂತೆ ಆಗ್ರಹಿಸಿದರು.ಆಗ ಜೆಡಿಎಸ್ ಶಾಸಕ ಸುರೇಶ್‍ಗೌಡ, ನಾಗಮಂಗಲ ತಾಲ್ಲೂಕಿನಲ್ಲೂ ಕುಡಿಯಲು ನೀರಿಲ್ಲ. ನಾವು ಕೊನೆಯ ಭಾಗದಲ್ಲಿದ್ದೇವೆ ಎಂದು ಸದನದ ಗಮನ ಸೆಳೆದರು.

ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಮಾತನಾಡಿ, ಕಳೆದ 25 ವರ್ಷಗಳಿಂದಲೂ ಕುಣಿಗಲ್ ತಾಲ್ಲೂಕಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ