ಬೆಂಗಳೂರು, ಡಿ.13- ನಗರದ ಶಂಕರಪುರಂ ಬಡಾವಣೆಯಲ್ಲಿರುವ ಕನ್ನಡ ಕಟ್ಟೆ ಸಂಸ್ಥೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕನ್ನಡ ಕಟ್ಟೆ ಪ್ರಶಸ್ತಿಯನ್ನು ನೀಡುತ್ತಿದ್ದು, ಪ್ರಸಕ್ತ ಸಾಲಿನ ಕನ್ನಡ ಕಟ್ಟೆ ಪ್ರಶಸ್ತಿಗೆ ಎನ್.ಆರ್.ಕಾಲೋನಿಯಲ್ಲಿರುವ ಕನ್ನಡದ ಹಿರಿಯ ಪರಿಚಾರಕ ಗುರುರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಗುರುರಾಜ್ ಅವರನ್ನು ಕಳೆದ 5 ದಶಕಗಳಿಂದ ಕನ್ನಡ ಪರವಾದಂತಹ ಚಟುವಟಿಕೆಗಳನ್ನು ಮತ್ತು ಸಮಾಜ ಸೇವಾ ಕಾರ್ಯವನ್ನು ಮಾಡಿಕೊಂಡು ಬಂದಿದ್ದಾರೆ.ಸರ್ಕಾರಿ ಕಚೇರಿಗಳ ನಾಮಫಲಕಗಳಲ್ಲಿ ಕನ್ನಡ ಕಾಣದಿದ್ದಾಗ ಸರ್ಕಾರದ ವಿವಿಧ ಅರ್ಜಿ ನಮೂನೆಗಳಲ್ಲಿ ಬ್ಯಾಂಕ್ಗಳು, ರೈಲ್ವೆ ಇಲಾಖೆ, ವಿಮಾ ಇಲಾಖೆ, ಎಲ್ಲಿಯೇ ಆಗಲಿ ಅಲ್ಲಿ ಅರ್ಜಿ ನಮೂನೆಗಳು ಕನ್ನಡ ಭಾಷೆಯಲ್ಲಿ ಇರಬೇಕೆಂಬ ಹೋರಾಟ ಮಾಡಿದವರು.
ವಿಶೇಷವಾಗಿ ಅಂಗವಿಕಲರಿಗೆ, ವಯೋ ವೃದ್ಧರಿಗೆ ಸರ್ಕಾರದಿಂದ ದೊರೆಯಬಹುದಾದ ಪಿಂಚಣಿ ಸೌಲಭ್ಯಗಳನ್ನು ಕೊಡಿಸುವ ಸಲುವಾಗಿ ನಗರದ ನಾಡ ಕಚೇರಿಯಲ್ಲಿ ಜನರ ನಡುವಿನ ಸೇತುವೆಯಾಗಿ ದುಡಿಯುತ್ತಿದ್ದಾರೆ.
ತಮ್ಮ ಅಂಗವೈಕಲ್ಯತೆಯನ್ನೂ ಮರೆತು ಉತ್ಸಾಹದಿಂದ ದುಡಿಯುತ್ತಿರುವ ಇವರು ಬಸವನಗುಡಿ ಭಾಗದ ಜನಪ್ರಿಯ ಕನ್ನಡ ಕಾರ್ಯಕರ್ತರು ಮತ್ತು ಸಮಾಜ ಸೇವಕರು. ಗುರುರಾಜ್ರವರು ಧಾರ್ಮಿಕ ಕ್ಷೇತ್ರದಲ್ಲಿಯೂ ಸಹ ಸಾಕಷ್ಟು ಕೆಲಸ ಮಾಡಿದ್ದಾರೆ.
ಇವರ ಹಿರಿತನ ಮತ್ತು ಸೇವೆಯನ್ನು ಗುರುತಿಸಿ ಕನ್ನಡ ಕಟ್ಟೆ ಈ ವರ್ಷದ ಪ್ರಶಸ್ತಿಯನ್ನು ಡಿ.29ರಂದು ರಾಷ್ಟ್ರಕವಿ ಕುವೆಂಪು ಅವರ 114ನೆ ಜಯಂತ್ಯುತ್ಸವದ ಸಂದರ್ಭದಲ್ಲಿ ಕನ್ನಡ ಕಟ್ಟೆಯ ಆವರಣದಲ್ಲಿ ನೆನಪಿನ ಕಾಣಿಕೆ ಮತ್ತು ನಗದು 10,000 ರೂ.ಗಳ ಪುರಸ್ಕಾರವನ್ನು ನೀಡಿ ಗೌರವಿಸುತ್ತಿದೆ ಎಂದು ಕನ್ನಡ ಕಟ್ಟೆಯ ಅಧ್ಯಕ್ಷರಾದ ಮಾವಳ್ಳಿ ಅರವಿಂದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.