ಕಾಂಗ್ರೇಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಬಿಬಿಎಂಪಿ ಸದಸ್ಯ ನಾಗರಾಜ್ ಅವರಿಗೆ ವಿಪ್ ಕೊಡಲಿರುವ ಬಿಜೆಪಿ

ಬೆಂಗಳೂರು, ಡಿ.13- ಬಿಜೆಪಿ ಸದಸ್ಯರಾಗಿದ್ದುಕೊಂಡೇ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಪಡೆಯಲೆತ್ನಿಸಿರುವ ಭೆರಸಂದ್ರ ವಾರ್ಡ್ ಕಾಪೆರ್Çರೇಟರ್ ನಾಗರಾಜ್ ಅವರಿಗೆ ಬಿಜೆಪಿ ವಿಪ್ ಮೂಲಕ ಠಕ್ಕರ್ ಕೊಡುವ ತಂತ್ರ ಹೆಣೆದಿದೆ.

ನಾಳೆ ನಡೆಯಲಿರುವ 12 ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ 9 ಸದಸ್ಯರಿರುವ ನಗರ ಯೋಜನೆ ಸ್ಥಾಯಿ ಸಮಿತಿಗೆ ನಾಗರಾಜ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಅವರು ಒಲವು ವ್ಯಕ್ತಪಡಿಸಿದ್ದಾರೆ.

11 ಜನ ಸದಸ್ಯರಿರಬೇಕಾದ ಈ ಸ್ಥಾಯಿ ಸಮಿತಿಯಲ್ಲಿ 9 ಜನ ಸದಸ್ಯರಿದ್ದಾರೆ.ನಾಗರಾಜ್ ಸೇರಿದಂತೆ ಕಾಂಗ್ರೆಸ್ ಕಡೆ 6 ಜನರಿದ್ದರೆ, ಪಕ್ಷೇತರ ಸದಸ್ಯರಾದ ಮಮತಾ ಶರವಣ ಸೇರಿದಂತೆ ಬಿಜೆಪಿ ಕಡೆ 4 ಜನ ಇದ್ದಾರೆ.ಈ ಅಂಕಿ-ಅಂಶಗಳ ಆಧಾರದ ಮೇಲೆ ನಾಗರಾಜ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿತ್ತು.

ಇದಕ್ಕೆ ಪ್ರತಿತಂತ್ರ ಹೆಣೆದಿರುವ ಬಿಜೆಪಿ, ಪಕ್ಷೇತರ ಅಭ್ಯರ್ಥಿಯಾದ ಮಮತಾ ಶರವಣ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಸಿ ಬಿಜೆಪಿ ಸದಸ್ಯರಾಗಿರುವ ಎಂ.ನಾಗರಾಜ್ ಸೇರಿದಂತೆ ಉಳಿದವರಿಗೆ ವಿಪ್ ಜಾರಿ ಮಾಡಲು ನಿರ್ಧರಿಸಿದೆ.

ವಿಪ್ ಜಾರಿಯಾದರೆ ಬಿಜೆಪಿಯ ನಾಲ್ವರು ಸದಸ್ಯರು ಹಾಗೂ ಅಮಾನತ್ತಾಗಿರುವ ಎನ್.ನಾಗರಾಜ್ ಅವರು ಪಕ್ಷದ ಪರವಾಗಿ ಮತ ಚಲಾಯಿಸಬೇಕಾಗುತ್ತದೆ.
ಕಾಂಗ್ರೆಸ್ ಅಭ್ಯರ್ಥಿಯಾದ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಅವರ ಪರವಾಗಿ ಬಹಿರಂಗವಾಗಿಯೇ ಪ್ರಚಾರ ಮಾಡಿದ್ದರಿಂದ ಇವರನ್ನು ಅಮಾನತುಗೊಳಿಸಲಾಗಿತ್ತು.ಆದರೆ, ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಿಲ್ಲ. ಹಾಗಾಗಿ ಚುನಾವಣಾ ಸಂದರ್ಭದಲ್ಲಿ ಇವರಿಗೆ ವಿಪ್ ನೀಡಬಹುದಾಗಿದೆ. ವಿಪ್ ಉಲ್ಲಂಘಿಸಿದರೆ ಇವರ ಸದಸ್ಯತ್ವ ರದ್ದಾಗುತ್ತದೆ.

ನಾಳೆ ನಡೆಯಲಿರುವ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಚುನಾವಣೆಯಲ್ಲಿ ಎನ್.ನಾಗರಾಜ್ ಅವರು ಅನಿವಾರ್ಯವಾಗಿ ಬಿಜೆಪಿಗೆ ಮತ ಚಲಾಯಿಸಬೇಕು. ಇಲ್ಲವೆ ಕಣದಿಂದ ಹಿಂದೆ ಸರಿಯಬೇಕು.ನಾಗರಾಜ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ತಮ್ಮ ಮಗಳ ಗೆಲುವಿಗೆ ಸಹಕರಿಸಿದ್ದಕ್ಕೆ ಋಣ ಸಂದಾಯ ಮಾಡಲು ರಾಮಲಿಂಗಾರೆಡ್ಡಿ ಅವರು ಪ್ರಯತ್ನ ಮುಂದುವರಿಸಿದ್ದಾರೆ.

ಸದಸ್ಯರು ಹಾಗೂ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ.ಆದರೆ, ಬಿಜೆಪಿ ನಾಯಕರು ತಮ್ಮ ಪಟ್ಟು ಸಡಿಲಿಸಿಲ್ಲ. ಯಲಹಂಕ ಶಾಸಕ ವಿಶ್ವನಾಥ್ ಅವರ ಪತ್ನಿ ವಾಣಿ ವಿಶ್ವನಾಥ್ ಅವರ ಸೋಲಿಗೆ ಕಾರಣರಾಗಿದ್ದ ಚಂದ್ರಪ್ಪರೆಡ್ಡಿ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಲು ಬಿಜೆಪಿ ನಾಯಕರು ಅವಕಾಶ ನೀಡಿರಲಿಲ್ಲ.
ಅದೇ ರೀತಿ ನಾಗರಾಜ್ ಅವರಿಗೂ ಅವಕಾಶ ನೀಡುವ ಸಾಧ್ಯತೆಗಳು ಕ್ಷೀಣವಾಗಿವೆ. ನಾಳೆ ಏನಾಗಲಿದೆಯೋ ಕಾದು ನೋಡಬೇಕು.ನಗರ ಯೋಜನೆ ಸ್ಥಾಯಿ ಸಮಿತಿಗೆ ಯಾರು ಅಧ್ಯಕ್ಷರಾಗಲಿದ್ದಾರೆ ಎಂಬ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.

9 ಸದಸ್ಯರಿರುವ ಸ್ಥಾಯಿ ಸಮಿತಿಗೆ ಇನ್ನೂ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಬೇಕೆಂದರೆ ಪ್ರಾದೇಶಿಕ ಆಯುಕ್ತರು ಮತ್ತೆ ಚುನಾವಣೆ ನಡೆಸಬೇಕು.ಆ ಪ್ರಕ್ರಿಯೆ ವಿಳಂಬವಾಗುತ್ತದೆ.ಇರುವ 9 ಸದಸ್ಯರಲ್ಲೇ ಬಹುಮತವನ್ನು ಪರಿಗಣಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ.ಏನಾಗುತ್ತದೆಯೋ ಎಂಬುದಕ್ಕೆ ನಾಳಿನ ಚುನಾವಣೆ ವರೆಗೆ ಕಾಯಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ