ಘರ್ಜಿಸುತ್ತಿರುವ ಪೊಲೀಸ್ ಪಿಸ್ತೂಲ್, ಸಮಾಜಘಾತುಕರ ಎದೆಯಲ್ಲಿ ನಡುಕ

ಬೆಂಗಳೂರು, ಡಿ.13- ಇತ್ತೀಚೆಗೆ ಘರ್ಜಿಸುತ್ತಿರುವ ಪೊಲೀಸರ ಪಿಸ್ತೂಲು ಸಮಾಜಘಾತುಕರ ಎದೆಯಲ್ಲಿ ನಡುಕ ಹುಟ್ಟಿಸಿದೆ.ಕಾರ್ಯಾಚರಣೆ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ವಿವಿಧ ಪ್ರಕರಣಗಳಲ್ಲಿ ಇದುವರೆಗೂ ಏಳು ಆರೋಪಿಗಳ ಮೇಲೆ ಆತ್ಮರಕ್ಷಣೆಗಾಗಿ ಖಾಕಿ ಪಡೆ ಗುಂಡು ಹಾರಿಸಿ ಬಂಧಿಸಿದೆ.

ಇಂದು ಬೆಳಗಿನ ಜಾವ 3.30ರ ಸಮಯದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿ ಮುರುಳಿ ಅಲಿಯಾಸ್ ಮುರುಳಿಧರನನ್ನು ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಬೈಯಪ್ಪನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಿನ್ನೆ ರಾತ್ರಿ ಠಾಣಾ ವ್ಯಾಪ್ತಿಯ ಕತ್ತಾಳಿಪಾಳ್ಯ ಮುಖ್ಯರಸ್ತೆಯಲ್ಲಿ ಇನ್‍ಸ್ಪೆಕ್ಟರ್ ಜಿ.ಪಿ.ರಮೇಶ್ ಮತ್ತು ಸಿಬ್ಬಂದಿ ವರ್ಗದವರು ವಾಹನ ತಪಾಸಣೆ ನಡೆಸುತ್ತಿದ್ದರು.
ಬೆಳಗಿನ ಜಾವ 3.30ರ ಸಮಯದಲ್ಲಿ ಆರೋಪಿ ಮುರುಳಿಧರನ್ ಹೋಂಡಾ ಆ್ಯಕ್ಟೀವಾದಲ್ಲಿ ಅತಿವೇಗವಾಗಿ ಚಲಿಸುತ್ತಿದುದ್ದನ್ನು ಗಮನಿಸಿದ ಇನ್‍ಸ್ಪೆಕ್ಟರ್ ರಮೇಶ್ ಅವರು ವಾಹನ ತಡೆದು ಶರಣಾಗುವಂತೆ ಸೂಚಿಸಿದರು.

ಆದರೆ ಮುರುಳಿಧರನ್ ಏಕಾಏಕಿ ಹೆಡ್‍ಕಾನ್‍ಸ್ಟೆಬಲ್ ವಿಜಯಕುಮಾರ್ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ. ಈ ಸಂದರ್ಭದಲ್ಲಿ ಆರೋಪಿಗೆ ಎಚ್ಚರಿಕೆ ನೀಡಿದರೂ ಲೆಕ್ಕಿಸದೆ ಮತ್ತೆ ಹಲ್ಲೆ ನಡೆಸಲು ಮುಂದಾದಾಗ ಪೊಲೀಸರ ರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿ ಕುಸಿದು ಬಿದ್ದ.
ಗಾಯಗೊಂಡ ಆರೋಪಿ ಮುರುಳಿಧರನ್‍ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಯಲ್ಲಿ ಗಾಯಗೊಂಡಿರುವ ಹೆಡ್ ಕಾನ್‍ಸ್ಟೆಬಲ್ ವಿಜಯ್‍ಕುಮಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರಿಗೆ ಸಿಕ್ಕಿಬಿದ್ದಿರುವ ಮುರುಳಿಧರನ್ ಕೊಲೆ ಆರೋಪಿಯಾಗಿದ್ದು, ಈತ ತನ್ನ ಸಹಚರರಾದ ಪೀಟರ್, ವಿಷ್ಣು ಮತ್ತು ವಜ್ರೇಶ್ ಅವರೊಂದಿಗೆ ಸೇರಿ ನಗರದ ವಿವಿಧೆಡೆ ಕೊಲೆ, ಸುಲಿಗೆ ಮತ್ತು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಸಹಚರರಾಗಿದ್ದ ಪೀಟರ್, ವಿಷ್ಣು ಮತ್ತು ವಜ್ರೇಶ್‍ನನ್ನು ಬೈಯಪ್ಪನಹಳ್ಳಿ ಪೊಲೀಸರು ಈಗಾಗಲೇ ದಸ್ತಗಿರಿ ಮಾಡಿರುತ್ತಾರೆ.
ಘರ್ಜಿಸಿದ ಪೊಲೀಸ್ ಪಿಸ್ತೂಲ್:
ನವೆಂಬರ್‍ನಿಂದ ಇಲ್ಲಿಯವರೆಗೆ ಪೊಲೀಸರ ಪಿಸ್ತೂಲು ಆರು ಬಾರಿ ಘರ್ಜಿಸಿದ ಪರಿಣಾಮ ಒಟ್ಟು ಏಳು ಮಂದಿ ಆರೋಪಿಗಳು ಬಲೆಗೆ ಬಿದ್ದಿದ್ದಾರೆ.
ಕಳೆದ ನವೆಂಬರ್ 28ರಿಂದ ಇಲ್ಲಿಯವರೆಗೆ ಆರು ಪ್ರಕರಣಗಳಲ್ಲಿ ಗುಂಡು ಹಾರಿಸಿ ಏಳು ಮಂದಿ ಆರೋಪಿಗಳನ್ನು ಸೆರೆ ಹಿಡಿಯುವ ಮೂಲಕ ಬೆಂಗಳೂರು ಪೊಲೀಸರು ಕ್ರಿಮಿನಲ್‍ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ