ಬೆಂಗಳೂರು, ಡಿ.13- ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ದೊರೆಯುವ ಸೌಲಭ್ಯಗಳು ಸಮಾನವಾಗಿ ಕ್ರಿಶ್ಚಿಯನ್ ಸಮುದಾಯಕ್ಕೆ ದೊರೆಯುತ್ತಿಲ್ಲ. ಹಾಗಾಗಿ ಕಡಿಮೆ ಜನಸಂಖ್ಯೆ ಹೊಂದಿರುವ ಕ್ರಿಶ್ಚಿಯನ್ನರು ಆರ್ಥಿಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಮೋಹನ್ ನಾಯ್ಡು ತಿಳಿಸಿದರು.
ಶೇಷಾದ್ರಿಪುರಂ ಎಕ್ಸೋಡಸ್ ಫೌಂಡೇಷನ್ ಹಾಗೂ ಕರ್ನಾಟಕ ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಕಲ್ಯಾಣ ಸಂಘದ ಆಶ್ರಯದಲ್ಲಿ ನಡೆದ ಗ್ರ್ಯಾಂಡ್ ಕ್ರಿಶ್ಚಿಯನ್ ಸೆಲಬ್ರೇಷನ್ನಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿರುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಕ್ರಿಶ್ಚಿಯನ್ನರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ.ಅದರಲ್ಲೂ ವಿಶೇಷವಾಗಿ ಕ್ರಿಶ್ಚಿಯನ್ ಸಮುದಾಯದ ಬಡ ವಿದ್ಯಾರ್ಥಿಗಳು ಸೌಲಭ್ಯ ವಂಚಿತರಾಗಿದ್ದು, ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಹರಸಾಹಸ ಪಡುತ್ತಿದ್ದಾರೆ ಎಂದು ಹೇಳಿದರು.
ಸಮುದಾಯ ಭವನಗಳನ್ನು ನಿರ್ಮಿಸುವಲ್ಲಿಯೂ ಸಹ ಕ್ರಿಶ್ಚಿಯನ್ ಸಂಘಟನೆಗಳು ಸರ್ಕಾರದ ಅನುದಾನ ಪಡೆಯುವಲ್ಲಿ ಹಿಂದುಳಿದಿವೆ. ಇನ್ನಾದರೂ ಸಂಘಟನೆಯೊಂದಿಗೆ ಸರ್ಕಾರದ ಸೌಲಭ್ಯಗಳ ವಿವರಗಳನ್ನು ಕ್ರಿಶ್ಚಿಯನ್ ಸಮುದಾಯದವರಿಗೆ ತಿಳಿಸುವ ಮೂಲಕ ಸೌಲಭ್ಯ ಪಡೆಯಲು ನೆರವು ನೀಡಬೇಕೆಂದು ಹೇಳಿದರು.