ನವದೆಹಲಿ: ನಾಳೆಯಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಜ.8ರವರೆಗೆ ನಡೆಯಲಿದೆ. ಈ ಬಾರಿ ಅಧಿವೇಶನದಲ್ಲಿ ರಫೆಲ್ ವಿವಾದ , ಸಿಬಿಐ ವಿವಾದ, ರೈತರ ಸಾಲಮನ್ನಾ, ಆರ್ ಬಿಐ ವಿವಾದ ಹಾಗೂ ಮೇಕೆದಾಟು, ಕಾವೇರಿ, ಮಹದಾಯಿ ವಿವಾದಗಳ ಕುರಿತು ಪ್ರಮುಖವಾಗಿ ಚರ್ಚೆ ನಡೆಯುವ ಸಾಧ್ಯತೆಯಿದೆ.
ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ನಾಳೆ ಬೆಳಗ್ಗೆ ಸಮಾವೇಶಗೊಳ್ಳುವ ಉಭಯ ಸದನಗಳಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ಕೇಂದ್ರದ ಮಾಜಿ ಸಚಿವರಾದ ಸಿ.ಕೆ.ಜಾಫರ್ ಷರೀಫ್, ಅಂಬರೀಶ್ ಸೇರಿದಂತೆ ಮೊದಲಾದವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಗುವುದು.
ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಿವಿಧ ವಿವಾದಗಳು ಪ್ರತಿಧ್ವನಿಸಲಿವೆ. 59,000 ಕೋಟಿ ರೂ. ವೆಚ್ಚದಲ್ಲಿ 32 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ , ಕೇಂದ್ರೀಯ ತನಿಖಾ ದಳ, ಸಿಬಿಐನ ಉನ್ನತಾಧಿಕಾರಿಗಳ ಕಿತ್ತಾಟ, ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಕೇಳಿ ಬಂದಿರುವ ಆರೋಪ, ರೈತರ ಆತ್ಮಹತ್ಯೆ ಸರಣಿ, ಬುಲಂದ್ಶಹರ್ ಹಿಂಸಾಚಾರ , ಆರ್ ಬಿಐ- ಹಣಕಾಸು ಸಚಿವಾಲಯದ ಆಂತರಿಕ ಕಲಹ , ಇಂಧನ ದರ ಏರಿಕೆ ಸೇರಿದಂತೆ ಕೆಲವು ಪ್ರಮುಖ ವಿಷಯಗಳು ಪ್ರಸ್ತಾಪವಾಗಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.
ಇನ್ನು ಸರ್ಕಾರ ತ್ರಿವಳಿ ತಲಾಖ್ ಮಸೂದೆಗೆ ಈ ಅಧಿವೇಶನದಲ್ಲಿ ಅಂಗೀಕಾರ ಪಡೆಯುವ ಸಾಧ್ಯತೆ ಇದೆ. ಅನೇಕ ಮಸೂದೆಗಳು ಸಹ ಮಂಡನೆಯಾಗಿ ಒಪ್ಪಿಗೆ ಪಡೆಯುವ ನಿರೀಕ್ಷೆ ಇದೆ.
Parliament, Winter Session