ಬೆಂಗಳೂರು, ಡಿ.7-ಎಸ್ಸಿ-ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿ ಉನ್ನತ ವ್ಯಾಸಂಗ ಪಡೆಯುವುದರಿಂದ ಭಾರತದ ಸಂಕುಚಿತ ಪರಿಸರದಿಂದ ಹೊರಬಂದು ಜ್ಞಾನ ವಿಕಾಸಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ವಿಧಾನಸೌಧದಲ್ಲಿ ಪ್ರಬುದ್ಧ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, 1970ರಲ್ಲಿ ನಾನು ಆಸ್ಟ್ರೇಲಿಯಾಕ್ಕೆ ತೆರಳಿ ಪಿಎಚ್ಡಿ ಪಡೆಯಲು ಕೇಂದ್ರ ಸರ್ಕಾರದ ಯೋಜನೆ ನೆರವಾಗಿತ್ತು. ಇಂಥಹದ್ದೇ ಅವಕಾಶಗಳಿಂದ ಎಸ್ಸಿ-ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳು ಹೆಚ್ಚು ಜ್ಞಾನಾರ್ಜನೆ ಪಡೆಯಲು ಸಾಧ್ಯವಾಗುತ್ತದೆ.ಪ್ರತಿಭೆ ಇದ್ದರೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ಮತ್ತು ಪರಿಸರದ ತೊಂದರೆಯಿಂದಾಗಿ ಉನ್ನತ ವ್ಯಾಸಂಗ ಮಾಡುವ ಅವಕಾಶ ಸಿಗುವುದಿಲ್ಲ. ಇದರಿಂದಾಗಿ ಅವರು ಮಾನಸಿಕವಾಗಿಯೂ ಕುಗ್ಗಿಹೋಗುತ್ತಾರೆ.ಮನಸ್ಸಿದ್ದರೆ ಮಾರ್ಗ ಎಂಬ ನಾಣ್ಣುಡಿಯನ್ನು ನಿಜ ಮಾಡಲು ಸರ್ಕಾರ ಪ್ರಬುದ್ಧ ಯೋಜನೆಯನ್ನು ರೂಪಿಸಿದೆ ಎಂದು ಹೇಳಿದರು.
ಈ ಮೊದಲು ಸ್ನಾತಕೋತ್ತರ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ಯೋಜನೆ ಜಾರಿಯಲ್ಲಿತ್ತು. ಕರ್ನಾಟಕ ಸರ್ಕಾರ ಮೊದಲ ಬಾರಿಗೆ ಪದವಿ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳುವ ಪ್ರಬುದ್ಧ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಲ್ಲಿ ವಿದ್ಯಾರ್ಥಿಗಳ ವಿಮಾನ ಪ್ರಯಾಣ ವೆಚ್ಚ, ಗ್ರಂಥಾಲಯ ವೆಚ್ಚ, ದಿನನಿತ್ಯದ ಖರ್ಚುಗಳು ಸೇರಿದಂತೆ ಎಲ್ಲಾ ವೆಚ್ಚವನ್ನು ಸರ್ಕಾರ ಸಂಪೂರ್ಣವಾಗಿ ಭರಿಸಲಿದೆ. ದೇಶದಲ್ಲೇ ಇದು ಪ್ರಥಮ ಪ್ರಯತ್ನವಾಗಿದೆ. ಕುರಿ, ಕೋಳಿ, ಮೇಕೆ ಖರೀದಿಗೆ ಸಾಲ ಕೊಡುವ ಜೊತೆಗೆ ಒಬ್ಬ ಮನುಷ್ಯನ ಬದುಕನ್ನು ರೂಪಿಸುವ ಶಿಕ್ಷಣ ಪಡೆಯಲು ಯೋಜನೆ ರೂಪಿಸಿರುವುದು ಶ್ಲಾಘನೀಯ ಎಂದರು.
ಭಾರತದ ಸಂಕುಚಿತ ವಾತಾವರಣದಿಂದ ಹೊರಬಂದು ವಿಕಸಿತ ಜ್ಞಾನ ಪಡೆಯಲು ಪ್ರಬುದ್ಧ ಯೋಜನೆ ಸಹಕಾರಿಯಾಗಿದೆ.2001ರಿಂದಲೂ ವಿದೇಶಿ ವ್ಯಾಸಂಗಕ್ಕೆ ನೆರವು ನೀಡುವ ಯೋಜನೆ ಜಾರಿಯಲ್ಲಿದ್ದು, 197 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.ಅದರಲ್ಲಿ ಅತಿ ಹೆಚ್ಚು ಎಂದರೆ 78 ಮಂದಿ ಅಮೆರಿಕಾಕ್ಕೆ ಹೋಗಿದ್ದಾರೆ.ಇತ್ತೀಚೆಗೆ ಬೇರೆ ಬೇರೆ ದೇಶಗಳಿಗೆ ಹೋಗುವ ಆಸಕ್ತಿ ತೋರಿಸುತ್ತಿದ್ದಾರೆ.ಅಲ್ಲಿನ ವಿಶ್ವವಿದ್ಯಾನಿಲಯಗಳು ನಮ್ಮ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಸಹಮತ ವ್ಯಕ್ತಪಡಿಸುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.
ಪದವಿ ಹಂತದಲ್ಲಿ ಮುಂದಿನ ಭವಿಷ್ಯ ನಿರ್ಧರಿಸುವ ಮತ್ತು ಯಾವ ವಿಷಯದಲ್ಲಿ ತಜ್ಞತೆ ಪಡೆಯಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿ ವಿದೇಶಿ ಪ್ರವಾಸಕ್ಕೆ ಅವಕಾಶ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ.
ಬರೋಡಾದ ಮಹಾರಾಜರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ವಿದ್ಯಾರ್ಥಿ ವೇತನ ನೀಡಿ ಕೊಲಂಬಿಯಾ ವಿವಿಯ ವ್ಯಾಸಂಗಕ್ಕೆ ಕಳುಹಿಸದೆ ಇದ್ದಿದ್ದರೆ, ಅನಂತರ ಅಂಬೇಡ್ಕರ್ ಬೇರೆ ಬೇರೆ ವಿವಿಗಳಿಗೆ ಭೇಟಿ ನೀಡದೆ ಇದ್ದರೆ ವಿಶ್ವದ ಶ್ರೇಷ್ಟ ಸಂವಿಧಾನ ಎಂದು ಹೆಸರು ಪಡೆದಿರುವ ಭಾರತದ ಸಂವಿಧಾನವನ್ನು ರಚನೆ ಮಾಡಲು ಕಷ್ಟವಾಗುತ್ತಿತ್ತು. ಬೇರೆ ಬೇರೆ ದೇಶಗಳ ಎಲ್ಲಾ ಜ್ಞಾನಗಳನ್ನು ಅರ್ಥೈಸಿಕೊಂಡು ಅಂಬೇಡ್ಕರ್ ಭಾರತದ ಸಂವಿಧಾನ ರಚಿಸಿದ್ದಾರೆ ಎಂದು ಹೇಳಿದರು.
ಎಸ್ಸಿ-ಎಸ್ಟಿ ಸಮುದಾಯಗಳು ಮುಖ್ಯ ವಾಹಿನಿಗೆ ಬರಬೇಕೆಂದು ಬಾಯಿ ಮಾತಿಗೆ ಹೇಳಿದರೆ ಸಾಲದು, ಅವರನ್ನು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢಗೊಳಿಸಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಈ ಯೋಜನೆಗಾಗಿ 120 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.ವಾರ್ಷಿಕ 8 ಲಕ್ಷ ಆದಾಯ ಇರುವ ಕುಟುಂಬಗಳ ವಿದ್ಯಾರ್ಥಿಗಳು ವಿದೇಶ ವ್ಯಾಸಂಗ ಮಾಡಲು ಅಗತ್ಯವಾದ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ.8 ರಿಂದ 15 ಲಕ್ಷ ವಾರ್ಷಿಕ ಆದಾಯ ಇರುವ ಕುಟುಂಬದ ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗ ವೆಚ್ಚದ ಶೇ.50ರಷ್ಟನ್ನು ಸರ್ಕಾರ ಭರಿಸುತ್ತದೆ.15 ಲಕ್ಷ ಮೇಲ್ಪಟ್ಟ ಆದಾಯ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳ ವೆಚ್ಚದ ಶೇ.33ರಷ್ಟನ್ನು ಸರ್ಕಾರ ಭರಿಸಲಿದೆ.
ಫಲಾನುಭವಿಗಳ ಆಯ್ಕೆ ವೇಳೆ ಮಹಿಳೆಯರಿಗೆ ಶೇ.33ರಷ್ಟು, ವಿಕಲಚೇತನರಿಗೆ ಶೇ.4ರಷ್ಟು ಮೀಸಲಾತಿ ನೀಡಲಾಗಿದೆ. ವಿದೇಶ ವ್ಯಾಸಂಗ ಮುಗಿದ ನಂತರ ವಿದ್ಯಾರ್ಥಿ ಸ್ವದೇಶಕ್ಕೆ ಮರಳಬೇಕು. ಕೆಲ ವರ್ಷಗಳ ನಂತರ ಅವರು ಬೇಕಿದ್ದರೆ ಕೆಲಸಕ್ಕೆ ವಿದೇಶಕ್ಕೆ ಹೋಗಬಹುದು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಲಹೆಗಾರ ವೆಂಕಟಯ್ಯ ಮತ್ತಿತರರು ಉಪಸ್ಥಿತರಿದ್ದರು.