ಬೆಂಗಳೂರು, ಡಿ.7-ಕೆರೆ ನಿರ್ವಹಣೆ ವಿಚಾರವಾಗಿ ರಾಜ್ಯ ಸರ್ಕಾರ ಯಾವುದೇ ನಿರ್ಲಕ್ಷ್ಯ ಮಾಡಿಲ್ಲ. ಆದಾಗ್ಯೂ ಸುಪ್ರೀಂಕೋರ್ಟ್‍ನ ಹಸಿರು ನ್ಯಾಯಪೀಠ ಸರ್ಕಾರಕ್ಕೆ ದಂಡ ವಿಧಿಸಿರುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನ ಬಸವೇಶ್ವರ ನಗರದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಸರ್ಗ ಭವನದಲ್ಲಿ ಬಿ.ಬಸವಲಿಂಗಪ್ಪ ಜಲ ಪರೀಕ್ಷಾ ಪ್ರಯೋಗಾಲಯ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಸಿರು ನ್ಯಾಯಪೀಠ(ಎನ್‍ಜಿಟಿ) ಆದೇಶದ ಪ್ರತಿ ಇನ್ನೂ ನಮ್ಮ ಕೈ ಸೇರಿಲ್ಲ. ಅದನ್ನು ಪರಿಶೀಲಿಸಿದ ಬಳಿಕ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚಿಸಲಾಗುವುದು. ಯಾವ ಆಧಾರದ ಮೇಲೆ ಎನ್‍ಜಿಟಿ ಸರ್ಕಾರದ ಮೇಲೆ ದಂಡ ವಿಧಿಸಿದೆ ಎಂದು ತಿಳಿದಿಲ್ಲ. ಆದರೆ ದಂಡ ಹಾಕುವ ಬೆಳವಣಿಗೆ ಸರಿಯಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ಬೆಳ್ಳಂದೂರು ಕೆರೆ ನಿರ್ವಹಣೆಗೆ ಹೆಚ್ಚಿನ ಕಾಳಜಿ ವಹಿಸಿದೆ. ಇದಕ್ಕಾಗಿ 50 ಕೋಟಿ ರೂ.ಮೀಸಲಿರಿಸಿದೆ, ಕಾಮಗಾರಿಗಳು ಆರಂಭಗೊಂಡಿವೆ.
ದಂಡ ವಿಧಿಸಿರುವ ಎನ್‍ಜಿಟಿ ಒಂದು ತಿಂಗಳ ಗಡುವು ನೀಡಿದೆ.ದಂಡ ವಿಧಿಸಲು ಅವರ ವ್ಯಾಪ್ತಿ ಎಷ್ಟು ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ ಎಂದರು.
ಪ್ರಯೋಗಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಲಿಂಗಪ್ಪ ಅವರು ಪರಿಸರ ಇಲಾಖೆಯ ಮೊದಲ ಸಚಿವರಾಗಿದ್ದರು. ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರು. ಅವರ ಹೆಸರಿನಲ್ಲಿ ಪ್ರಯೋಗಾಲಯ ತೆರೆದಿರುವುದು ಪ್ರಶಂಸನೀಯ ಎಂದು ಹೇಳಿದರು.
ರಾಜ್ಯದ ಎಂಟು ಜಾಗಗಳಲ್ಲಿ ಪ್ರಯೋಗಾಲಯ ತೆರೆಯಲಾಗಿದ್ದು, ನೀರಿನ ಶುದ್ಧತೆ ಬಗ್ಗೆ ಇಲ್ಲಿ ಕರಾರುವಕ್ಕಾದ ಪರೀಕ್ಷೆ ಮಾಡಿ ಫಲಿತಾಂಶ ನೀಡಲಾಗುತ್ತದೆ. ಇದು ಇತರ ಪ್ರಯೋಗಾಲಯಗಳಿಗಿಂತಲೂ ಮಾದರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ನೀರು ಕಲುಷಿತಗೊಳ್ಳುತ್ತಿದ್ದು, ಇದರ ಶುದ್ಧೀಕರಣಕ್ಕೆ ಪ್ರಯೋಗಾಲಯಗಳ ಅಗತ್ಯತೆ ಹೆಚ್ಚಿದೆ.ಮಾಲಿನ್ಯಗಳ ಬಗ್ಗೆ ಜನಸಾಮಾನ್ಯರೂ ಕೂಡ ಹೆಚ್ಚಿನ ಕಾಳಜಿ ವಹಿಸಬೇಕು.ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.