ಕೊಡಗು ಜಿಲ್ಲೆಗೆ ಕೇಂದ್ರ ಪ್ರತ್ಯೇಕ ಅನುಧಾನ ನೀಡಿಲ್ಲ : ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಡಿ.7-ನೆರೆ ಹಾವಳಿಯಿಂದ ಬಹುತೇಕ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಅನುದಾನ ನೀಡಿಲ್ಲ. ಬದಲಾಗಿ 8 ಜಿಲ್ಲೆಗಳ ಮಳೆ ಅನಾಹುತಗಳಿಗೆ 546 ಕೋಟಿ ರೂ.ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮಡಿಕೇರಿ ಜಿಲ್ಲೆ ಮಾದಾಪುರ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಹಾವಳಿ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ಕೇಂದ್ರ ಸರ್ಕಾರ ನವೆಂಬರ್ 18 ರಂದು ರಾಜ್ಯಸರ್ಕಾರಕ್ಕೆ ಪತ್ರ ಬರೆದಿದ್ದು, ರಾಜ್ಯ ಪ್ರಕೃತಿ ವಿಕೋಪ ನಿಧಿಯಲ್ಲಿರುವ ಹಣದ ಪೈಕಿ 546 ಕೋಟಿ ರೂ.ಗಳನ್ನು 8 ಜಿಲ್ಲೆಗಳ ಪರಿಹಾರ ಕಾಮಗಾರಿಗಳಿಗೆ ಬಳಸುವಂತೆ ಸೂಚನೆ ನೀಡಿದೆ.

ಖರ್ಚು ಮಾಡಿರುವ ಸಮಗ್ರ ವರದಿಯನ್ನು 3 ತಿಂಗಳೊಳಗಾಗಿ ಕೇಂದ್ರಕ್ಕೆ ತಲುಪಿಸುವಂತೆ ಸೂಚನೆ ನೀಡಲಾಗಿದೆ.ಸಂಪೂರ್ಣ ಮಾಹಿತಿ ಇಲ್ಲದ ಕೆಲವರು ಕೊಡಗಿಗಾಗಿಯೇ 546 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಕೊಟ್ಟಿದೆ ಎಂದು ಅಪಪ್ರಚಾರ ಮಾಡುವುದು ಬೇಡ ಎಂದು ಸಿಎಂ ಹೇಳಿದರು.
ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆ ಅನಾಹುತಗಳಿಗೆ ಪರಿಹಾರ ನೀಡಲು ನಿಯಮಾವಳಿಗಳನ್ನು ಬದಿಗಿರಿಸಿದೆ. ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಎಂಬ ನಿಯಮಾವಳಿಗಳಿಗೆ ಜೋತುಬೀಳದೆ ನೇರವಾಗಿ ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡಲಾಗುತ್ತಿದೆ.ಮೆಣಸು, ಕಾಫಿ, ಭತ್ತ ಸೇರಿದಂತೆ ಇತರೆ ಬೆಳೆಗಳ ಹಾನಿಗೆ ವೈಜ್ಞಾನಿಕ ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು.

ಕೊಡಗು ನೆರೆ ಹಾವಳಿಗೆ ರಾಜ್ಯ ಸರ್ಕಾರಿ ನೌಕರರ 103 ಕೋಟಿ ರೂ.ಸೇರಿ ಸಾರ್ವಜನಿಕರು ಹಾಗೂ ಸರ್ಕಾರದ ಅಧೀನ ಸಂಸ್ಥೆಗಳಿಂದ 180 ಕೋಟಿ ರೂ.ಸಂಗ್ರಹವಾಗಿರಬಹುದು.ಅದರಲ್ಲಿ ಒಂದು ರೂಪಾಯಿಯನ್ನೂ ದುರ್ಬಳಕೆಯಾಗಲಿ ನಾನು ಅವಕಾಶ ನೀಡುವುದಿಲ್ಲ. ಮುಖ್ಯಮಂತ್ರಿಗಳ ಕೊಡಗು ಪರಿಹಾರ ನಿಧಿ ಎಂಬ ಖಾತೆಯಲ್ಲೇ ಅದನ್ನು ಇಡಲಾಗಿದೆ.ಕೊಡಗು ಪುನರ್ವಸತಿಗಾಗಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪ್ರಾಧಿಕಾರವನ್ನೂ ರಚಿಸಲಾಗಿದೆ ಎಂದು ಹೇಳಿದರು.

ಕೊಡಗು ಸಂತ್ರಸ್ಥರಿಗೆ ಸಾರ್ವಜನಿಕರು ನೀಡಿದ ಸುಮಾರು 40 ಲಕ್ಷ ವಸ್ತುಗಳು ಬಳಕೆಯಾಗದೆ ಮೋರಿಯಲ್ಲಿ ಬಿದ್ದಿವೆ ಎಂಬ ವರದಿ ಪ್ರಕಟವಾಗಿದೆ.ನೆರೆ ಸಂತ್ರಸ್ಥರು ಇನ್ನೂ ತೊಂದರೆಯಲ್ಲಿದ್ದಾರೆ.ಅವರಿಗೆ ಹಂತ ಹಂತವಾಗಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗುವುದು.ಯಾವುದನ್ನೂ ಅಪವ್ಯಯಗೊಳ್ಳಲು ಬಿಡುವುದಿಲ್ಲ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಹೇಳಿದರು.

ಮಳೆ ಹಾನಿಯಲ್ಲಿ ಮನೆ ಕಳೆದುಕೊಂಡವರಿಗೆ 10.5 ಲಕ್ಷ ರೂ.ವೆಚ್ಚದಲ್ಲಿ ಎರಡು ಕೊಠಡಿಗಳ ಮನೆ ನಿರ್ಮಿಸಿಕೊಡಲಾಗುತ್ತದೆ.ಅದಕ್ಕೂ ಹೆಚ್ಚಿನ ವೆಚ್ಚವಾಗುವುದಾದರೆ ಅದನ್ನು ಫಲಾನುಭವಿಗಳೇ ಭರಿಸಬೇಕು.ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಶೆಡ್‍ಗಳನ್ನು ನಿರ್ಮಿಸಲು ಸುಮಾರು 1 ಲಕ್ಷ ರೂ.ವೆಚ್ಚವಾಗುತ್ತದೆ.ಅದರ ಬದಲಾಗಿ ಪ್ರತಿ ತಿಂಗಳು 10 ಸಾವಿರ ರೂ.ಮನೆ ಬಾಡಿಗೆ ನೀಡಲು ಸರ್ಕಾರ ನಿರ್ಧರಿಸಿದೆ.ಈ ಬಗ್ಗೆ ನಾನೇ ಮುತುವರ್ಜಿ ವಹಿಸಿ ನಿನ್ನೆ ಪ್ರಸ್ತಾವನೆಯನ್ನು ತರಿಸಿಕೊಂಡು ಸಹಿ ಹಾಕಿದ್ದೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ