ಬೆಂಗಳೂರು,ಡಿ.6- ಹಸಿದು ಬಂದ ಮಕ್ಕಳು ಉಪಾಹಾರ ನೀಡದಿದ್ದರಿಂದ ಅಂಬೇಡ್ಕರ್ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದ ವೇಳೆ ಗಲಾಟೆ ಮಾಡಿದ ಪ್ರಸಂಗ ನಡೆದಿದೆ.
ಬಿಬಿಎಂಪಿ ಶಾಲೆಗಳಲ್ಲಿ ಡಿಡಿ ರೋಶಿನಿ ಮತ್ತು ಸ್ಕೈಪ್ ಮೂಲಕ ಪಾಠ ಹೇಳುವ ಶೈಕ್ಷಣಿಕ ಟಿವಿ ವಾಹಿನಿ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವ ಮಕ್ಕಳಿಗೆ ಉಪಾಹಾರದ ವ್ಯವಸ್ಥೆ ಇದೆ ಎಂದು ಹೇಳಲಾಗಿತ್ತಾದರೂ ಬೆಳಗ್ಗೆ ಕಾರ್ಯಕ್ರಮಕ್ಕೆ ಹಾಜರಾದ ಮಕ್ಕಳಿಗೆ ಉಪಾಹಾರ ನೀಡಿರಲಿಲ್ಲ.
ಹೀಗಾಗಿ ಮಕ್ಕಳು ಅಂಬೇಡ್ಕರ್ ಭವನದ ನೆಲಮಹಡಿಯಲ್ಲಿ ಗಲಾಟೆ ನಡೆಸಿದ್ದರು.ಕಾರ್ಯಕ್ರಮಕ್ಕೂ ಮೊದಲೇ ತಿಂಡಿ ನೀಡಿದರೆ ಎದ್ದು ಹೋಗುತ್ತಾರೆ ಎಂಬ ಕಾರಣಕ್ಕೆ ಮೊದಲೇ ತಿಂಡಿ ನೀಡುವುದು ಬೇಡ ಎಂದು ಆಯುಕ್ತರು ತಿಳಿಸಿದ್ದರಿಂದ ಈ ಗೊಂದಲ ಎದುರಾಗಿತ್ತು.
ಕಾರ್ಯಕ್ರಮ ತಡವಾಗಿ ಆರಂಭವಾಗಿ ಮುಗಿಯುವ ಹೊತ್ತಿಗೆ 11.45 ಆಗಿತ್ತು.ಪ್ರಾಂಶುಪಾಲರು ಮೊದಲೇ ಮಕ್ಕಳಿಗೆ ಉಪಾಹಾರದ ವ್ಯವಸ್ಥೆ ಇದೆ ಎಂದು ಹೇಳಿದ್ದರಿಂದ ಹಸಿದು ಬಂದಿದ್ದ ಮಕ್ಕಳು ಕಾರ್ಯಕ್ರಮ ಮುಗಿಯುವವರೆಗೂ ಕಾಯಬೇಕಾದ ಪರಿಸ್ಥಿತಿ ಉಂಟಾಯಿತು.ಇದರಿಂದ ಮಕ್ಕಳು ಗಲಾಟೆ ಆರಂಭಿಸಿದ್ದರು.
ಕಾರ್ಯಕ್ರಮಕ್ಕೆ ಬಂದ ಬಿಬಿಎಂಪಿ ಶಾಲೆ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಉಪಾಹಾರ ನೀಡದೆ ಹೀನಾಯವಾಗಿ ನಡೆಸಿಕೊಳ್ಳಲಾಯಿತು ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದುದು ಕಂಡುಬಂದಿತು.