ಡಿ.22ರಂದು ಸಂಪುಟ ವಿಸ್ತರಣೆ ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು, ಡಿ.6- ಈಗಾಗಲೇ ಪ್ರಕಟಿಸಿರುವಂತೆ ಡಿ.22ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ.ಆ ಬಗ್ಗೆ ಅನುಮಾನ ಬೇಡ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕೃಷ್ಣ, ಕಾವೇರಿಕೊಳ್ಳದ ನೀರಿನ ಸಮರ್ಪಕ ಬಳಕೆ, ಅಂತಾರಾಜ್ಯ ಜಲ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಜಲಸಂಪನ್ಮೂಲ ಸಚಿವರೊಂದಿಗೆ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಡಿ.9ರಂದೇ ಸಚಿವ ಸಂಪುಟ ವಿಸ್ತರಣೆಯಾಗಬೇಕಿತ್ತು.ಡಿ.10ರಂದು ಬೆಳಗಾವಿಯಲ್ಲಿ ಅಧಿವೇಶನ ನಡೆಯುವುದರಿಂದ ಇದನ್ನು ಮುಂದೂಡಲಾಗಿದೆ.ಡಿ.21ರಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದರು.

ಬಿಜೆಪಿ ಬಿಡುಗಡೆ ಮಾಡಿರುವ ಸಿಎಜಿ ವರದಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರದಲ್ಲಿ ಯಾರೂ ಜೈಲಿಗೆ ಹೋಗಿಲ್ಲ ಎಂದು ತಿರುಗೇಟು ನೀಡಿದರು.

ಮೇಕೆದಾಟು ಯೋಜನೆ ನಿಲ್ಲದಂತೆ ಕಾನೂನು ತಜ್ಞರು ನೋಡಿಕೊಳ್ಳಬೇಕು.ನಮ್ಮ ಸರ್ಕಾರದ ಅವಧಿಯ ಮಹತ್ವಾಕಾಂಕ್ಷಿಯ ಯೋಜನೆ ಇದಾಗಿದ್ದು, ರಾಜಕೀಯ ಕಾರಣಕ್ಕಾಗಿ ತಮಿಳುನಾಡು ಸರ್ಕಾರ ಈ ಯೋಜನೆಗೆ ತಕರಾರು ಮಾಡುತ್ತಿದೆ.ಕಾನೂನು ತಜ್ಞರು ಸುಪ್ರೀಂಕೋರ್ಟ್‍ಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು.ಈ ಯೋಜನೆ ಶೀಘ್ರ ಕಾರ್ಯೋನ್ಮುಖವಾಗಬೇಕೆಂದು ಹೇಳಿದರು.

ಇಂದು ಕೃಷ್ಣ, ಕಾವೇರಿ ನದಿ ನೀರಿನ ವಿಚಾರವಾಗಿ ಚರ್ಚಿಸಲಾಯಿತು.ಕಾವೇರಿ ನ್ಯಾಯಾಧೀಕರಣ 2007ರಲ್ಲೇ ತೀರ್ಪು ನೀಡಿತ್ತು.ಅದರಂತೆ ಸಾಮಾನ್ಯ ವರ್ಷಗಳಲ್ಲಿ 192 ಟಿಎಂಸಿ ನೀರು ಬಿಡಬೇಕು ಎಂದು ಮತ್ತೆ 2018ರಲ್ಲಿ 14.75 ಟಿಎಂಸಿ ಕಡಿಮೆ ಮಾಡಿದ್ದು, ವಾರ್ಷಿಕ 177.25 ಟಿಎಂಸಿ ನೀರು ಬಿಡಬೇಕಾಗಿದೆ. ಹೆಚ್ಚುವರಿ ನೀರಿನ ಸಂಗ್ರಹಕ್ಕೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕುಡಿಯುವ ನೀರು, ವಿದ್ಯುತ್ ಉತ್ಪಾದನೆಗೆ ಈ ಯೋಜನೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ