ನವದೆಹಲಿ, ಡಿ.5- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಂತರಿಕ್ಷ ಅಭಿಯಾನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಇಸ್ರೋದ ಭಾರೀ ತೂಕದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-11 ಇಂದು ನಸುಕಿನಲ್ಲಿ ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನದಿಂದ ಏರಿಯನ್ಸ್ಪೇಸ್ ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆಗೊಂಡು, ನಿಗದಿತ ಕಕ್ಷೆ ಸೇರುವಲ್ಲಿ ಸಫಲವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಡಿಜಿಟಲ್ ಇಂಡಿಯಾ ಯೋಜನೆಗೆ ಇದು ಮತ್ತಷ್ಟು ಬಲ ನೀಡಲಿದೆ.
ದಕ್ಷಿಣ ಅಮೆರಿಕದ ಈಶಾನ್ಯ ಕರಾವಳಿಯಲ್ಲಿ ಫ್ರಾನ್ಸ್ ಗಡಿ ಬಳಿ ಇರುವ ಕೌರು ಪ್ರದೇಶದ ಏರಿಯನ್ ಉಡಾವಣಾ ಸಂಕೀರ್ಣದಿಂದ ಭಾರತೀಯ ಕಾಲಮಾನ ಇಂದು ನಸುಕಿನ 02.07 ಗಂಟೆಗೆ ಜಿಸ್ಯಾಟ್-11 ಉಪಗ್ರಹ ಬೆಂಕಿ ಕಾರುತ್ತಾ ನಭಕ್ಕೆ ಯಶಸ್ವಿಯಾಗಿ ಚಿಮ್ಮಿತು. 33 ನಿಮಿಷಗಳ ಸುಗಮ ಹಾರಾಟದ ನಂತರ ಏರಿಯನ್-5 ವಾಹನವು ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸಿತು ಎಂದು ಇಸ್ರೋ ತಿಳಿಸಿದೆ.
30 ನಿಮಿಷಗಳ ಹಾರಾಟದ ನಂತರ ಜಿಸ್ಯಾಟ್-11 ಏರಿಯನ್-5 ನೌಕೆಯ ಮೇಲಿನ ಹಂತದಿಂದ ಪ್ರತ್ಯೇಕಗೊಂಡು ಭೂಸ್ಥಿರ ವರ್ಗಾವಣೆ ಕಕ್ಷೆಗೆ ಸೇರಿತು.
ಭಾರತದಿಂದ ನಿರ್ಮಿಸಲಾದ ಭಾರೀ, ಬೃಹತ್, ಅತ್ಯಾಧುನಿಕ, ಅತ್ಯಂತ ಶಕ್ತಿಯುತ ಉಪಗ್ರಹವು ಇಂದು ಏರಿಯನ್-5 ಗಗನ ನೌಕೆ ಮೂಲಕ ಅಂತರಿಕ್ಷಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಉಡ್ಡಯನದ ನಂತರ ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದರು. ಇದು ಭಾರತದ ಅತ್ಯಂತ ಶ್ರೀಮಂತ ಬಾಹ್ಯಾಕಾಶ ಆಸ್ತಿ ಎಂದು ಅವರು ಬಣ್ಣಿಸಿದರು.
ಜಿಸ್ಯಾಟ್-11 ಒಟ್ಟು 5,954 ಕೆಜಿ ತೂಕ ಹೊಂದಿದೆ. ಇದು ಇಸ್ರೋದಿಂದ ನಿರ್ಮಾಣಗೊಂಡ ಉಪಗ್ರಹಗಳಲ್ಲೇ ಅತ್ಯಂತ ತೂಕ ಉಳ್ಳದ್ದಾಗಿದೆ.
500 ಕೋಟಿ ರೂ.ಗಳಲ್ಲಿ ಇಸ್ರೋದಿಂದ ಅಭಿವೃದ್ದಿಗೊಳಿಸಲಾದ ಈ ಉಪಗ್ರಹವು, 15 ವರ್ಷಗಳ ಕಾಲ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ.
ಉಪಗ್ರಹ ಬ್ಯಾಹಾಕಾಶದಲ್ಲಿ ಪ್ರತ್ಯೇಕಗೊಂಡ ನಂತರ, ಹಾಸನದಲ್ಲಿರುವ ಇಸ್ರೋ ಮಾಸ್ಟರ್ ಕಂಟ್ರೋಲ್ ಸೌಲಭ್ಯವು ಉಪಗ್ರಹದ ನಿಯಂತ್ರಣದ ಉಸ್ತುವಾರಿ ನೋಡಿಕೊಳ್ಳಲಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
ಡಿಜಿಟಲ್ ಇಂಡಿಯಾ ಯೋಜನೆಗೆ ಅಗಾಧ ಬಲ ತುಂಬುವ ಈ ಉಪಗ್ರಹವು ಅಂತರ್ಜಾಲಕ್ಕೆ(ಇಂಟರ್ನೆಟ್) ಮಿಂಚಿನ ವೇಗ ನೀಡಲಿದೆ. ಜಿಸ್ಯಾಟ್-11 ಉಪಗ್ರಹದ ವಿಸ್ಯಾಟ್ ಟರ್ಮಿನಲ್ನಿಂದಾಗಿ 16 ಜಿಬಿಪಿಎನ್(ಪ್ರತಿ ಸೆಕೆಂಡ್ಗೆ ಶತಕೋಟಿ ಬಿಟ್ ಡೇಟಾ ರವಾನೆ) ವೇಗದ ಇಂಟರ್ನೆಟ್ ಲಭ್ಯವಾಗಲಿದೆ.
ಹಾಲಿ ಸಂವಹನ ಉಪಗ್ರಹಗಳಿಗಿಂತ ಮೂರು ಪಟ್ಟು ಅಧಿಕ ಕಾರ್ಯಕ್ಷಮತೆಯನ್ನು ಇದು ಹೊಂದಿದ್ದು, ಮಲ್ಟಿ ಸ್ಪಾಟ್ ಬೀಮ್ ಆಂಟೇನಾಗಳಿಂದ ಇಡೀ ಭಾರತಕ್ಕೆ ಪ್ರಸರಣ ವ್ಯಾಪ್ತಿ ದೊರೆಯುತ್ತದೆ. ಅಲ್ಲದೇ ಗ್ರಾಮೀಣ ಭಾರತಕ್ಕೆ ಬ್ರಾಡ್ ಬ್ಯಾಂಡ್ ಸೌಲಭ್ಯ ಲಭಿಸಲಿದೆ.