ಜನತೆ ವಾಟ್ಸಪ್ ಮೂಲಕ ಸಮಸ್ಯೆ ತಿಳಿಸುವಂತೆ ಹೇಳಿದ ಉಪಮೇಯರ್

ಬೆಂಗಳೂರು, ಡಿ.5-ಸಾರ್ವಜನಿಕರಿಗೆ ನನ್ನ ವಾಟ್ಸಾಪ್ ನಂಬರ್ ಕೊಡುತ್ತೇನೆ, ವಾಟ್ಸಾಪ್ ಮೂಲಕ ಯಾವುದೇ ಸಮಸ್ಯೆ ತಿಳಿಸಿದರೆ ಅವುಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ನೂತನ ಉಪಮೇಯರ್ ಭದ್ರೇಗೌಡ ಇಂದಿಲ್ಲಿ ತಿಳಿಸಿದರು.

ಅವಿರೋಧವಾಗಿ ಉಪಮೇಯರ್ ಆಗಿ ಆಯ್ಕೆಯಾದ ನಂತರ ಮಾತನಾಡಿದ ಅವರು, ನನ್ನನ್ನು ಉಪಮೇಯರ್ ಆಗಲು ಸಹಕರಿಸಿದ ನಾಗಪುರ, ಮಹಾಲಕ್ಷ್ಮಿಲೇಔಟ್ ಸೇರಿದಂತೆ ಇಡೀ ನಗರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನನಗೆ ಸಿಕ್ಕಿರುವ ಈ ಅವಕಾಶವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತೇನೆ. 198 ವಾರ್ಡ್‍ಗಳ ಜನರ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇನೆ ಎಂದು ಹೇಳಿದರು.

ಬಿಬಿಎಂಪಿ ಸದಸ್ಯರು ತಮ್ಮ ವಾರ್ಡ್‍ಗಳ ಸಮಸ್ಯೆ ತಿಳಿಸಿದರೆ ಅವುಗಳನ್ನು ಮೇಯರ್ ಹಾಗೂ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ತಿಳಿಸಿದರು.
ವಾಹನ ದಟ್ಟಣೆ ನಿವಾರಣೆಗೆ ಎಲಿವೇಟೆಡ್ ಕಾರಿಡಾರ್ ಮಾಡಲು ಸರ್ಕಾರ ಮುಂದಾಗಿದೆ. ವಾರ್ಡ್‍ಗಳ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದು, ಕಸವಿಲೇವಾರಿ ಸೇರಿದಂತೆ ಪ್ರಚಲಿತ ಸಮಸ್ಯೆ ನಿವಾರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ನನ್ನ ಅವಧಿಯಲ್ಲಿ ಆಡಳಿತಾತ್ಮಕ ವರದಿಯನ್ನು ಸಲ್ಲಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕ ಕೆ.ಗೋಪಾಲಯ್ಯ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನನ್ನ ಮೇಲೆ ನಂಬಿಕೆ ಇಟ್ಟು ಉಪಮೇಯರ್ ಸ್ಥಾನ ಕೊಟ್ಟಿದ್ದಾರೆ. ಅವರ ನಂಬಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಎಲ್ಲ 198 ವಾರ್ಡ್‍ಗಳ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಭದ್ರೇಗೌಡ ಹೇಳಿದರು.
ವಿ.ಭದ್ರೇಗೌಡರ ಕಿರುಪರಿಚಯ: ಭದ್ರೇಗೌಡರು 16.6.1967ರಲ್ಲಿ ಜನಿಸಿದ್ದಾರೆ. ದಿವಂಗತ ಬೋರಪ್ಪ ಮತ್ತು ಬೋರಮ್ಮ ದಂಪತಿಯ ಪುತ್ರರಾದ ಭದ್ರೇಗೌಡರು ಬಿ.ಕಾಂ ಪದವೀಧರರು. ಬ್ಯಾಡ್ಮಿಂಟನ್ ಅವರ ಹವ್ಯಾಸವಾಗಿದ್ದು, ಪತ್ನಿ ಬಿ.ಮಂಜುಳ, ಬಿ.ಹರ್ಷಿತ್‍ಗೌಡ ಮತ್ತು ಬಿ. ಪ್ರಕೃತಿ ಎಂಬ ಇಬ್ಬರು ಮಕ್ಕಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ