ಸಮಾಜಸೇವಕ ಶಿವಾಜಿ ಛತ್ರೆಪ್ಪ ಕಾಗಣೀಕರ ಅವರ ಮಾತುಗಳು ಕಣ್ಣು ತೆರೆಸಿವೆ, ಸಿ.ಎಂ

ಬೆಂಗಳೂರು, ಡಿ.5- ಸ್ವಂತಕ್ಕೆ ಮನೆ ಅಥವಾ ನಿವೇಶನ ಮಾಡದೆ ಬದ್ಧತೆಯೊಂದಿಗೆ ಸಮಾಜ ಸೇವೆಯಲ್ಲಿ ನಿರತರಾಗಿರುವ ಶಿವಾಜಿ ಛತ್ರೆಪ್ಪ ಕಾಗಣೀಕರ ಅವರ ಮಾತುಗಳು ಸರ್ಕಾರದ ಕಣ್ಣು ತೆರೆಸಿವೆ. ಅವರು ಪ್ರಸ್ತಾಪಿಸಿರುವ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2018ನೇ ಸಾಲಿನ ರಾಜ್ಯಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿ ಛತ್ರೆಪ್ಪ ಅವರ ಕನಸಿನಂತೆ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸುವುದೇ ಸಮ್ಮಿಶ್ರ ಸರ್ಕಾರದ ಆಶಯವಾಗಿದೆ. ಇಂದಿನ ಶಿಕ್ಷಣ, ಪ್ರಕೃತಿ ವಿಪತ್ತಿಗೆ ಕಾರಣ ಎಂಬ ಅವರ ಮಾತುಗಳು ಸರ್ಕಾರದ ಕಣ್ಣು ತೆರೆಸಿವೆ ಎಂದು ಹೇಳಿದರು.
ಸರ್ಕಾರ ಮಾಡಬೇಕಾದ ಕೆಲಸವನ್ನು ಅವರು ಮಾಡಿ ತೋರಿದ್ದಾರೆ.ಗ್ರಾಮಗಳಲ್ಲಿನ ಉರುವಲಿನ ಸಮಸ್ಯೆ ನೀಗಿಸಲು ಗೋಬರ್ ಗ್ಯಾಸ್ ಘಟಕ ಆರಂಭಿಸಿ ಸೇವಾ ನಿರತರಾದ ಅವರು ಶಿಕ್ಷಣ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲೂ ಬಹಳಷ್ಟು ಸೇವೆ ಸಲ್ಲಿಸಿದ್ದಾರೆ.ಇಂಥವರಿಗೆ ದೇವರಾಜ ಅರಸು ಪ್ರಶಸ್ತಿ ದೊರೆತಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಾಜಿ ಛತ್ರೆಪ್ಪ ಕಾಗಣೀಕರ್ ಅವರು, ಬೆಳಗಾವಿಯ ಕೆಲವು ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಸೌದೆಗಾಗಿಯೇ ಇಡೀ ದಿನ ಹೊರಗೆ ಕೆಲಸ ಮಾಡಬೇಕಾಗುತ್ತಿತ್ತು.ಮಕ್ಕಳ ಆರೈಕೆ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಇದರ ಗಂಭೀರತೆ ಅರಿತು ಗೋಬರ್ ಗ್ಯಾಸ್ ಅನಿಲ ಘಟಕವನ್ನು ಸ್ವಯಂ ಸೇವಾ ಸಂಸ್ಥೆ ನೆರವಿನೊಂದಿಗೆ ಆರಂಭಿಸಿ 500 ಮನೆಗಳಿಗೆ ಮೊದಲು ಗ್ಯಾಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಂತ ಹಂತವಾಗಿ 30 ಸಾವಿರ ಮನೆಗಳಿಗೆ ಗೋಬರ್ ಗ್ಯಾಸ್ ವ್ಯವಸ್ಥೆ ಒದಗಿಸಲಾಗಿದೆ ಎಂದು ವಿವರಿಸಿದರು.

ಆ ಭಾಗದಲ್ಲಿ ಸಾಕ್ಷರತಾ ಪ್ರಮಾಣ ಸಾಕಷ್ಟು ಕಡಿಮೆ ಇತ್ತು.ಇದನ್ನು ನೀಗಿಸಲು ಖಾಸಗಿ ಶಾಲೆಗಳನ್ನು ತೆರೆದೆ.ಕಟ್ಟದ ಬಾವಿ ಎಂಬ ಗ್ರಾಮದಲ್ಲಿ ಒಂದೇ ಒಂದು ಬಾವಿ ಇತ್ತು.ಇದರಲ್ಲೂ ಸಹ ಅಂತರ್ಜಲ ಬಳಕೆ ಹೆಚ್ಚಾದಾಗ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ನೀರು ಇಂಗಿ ಹೋಗಿ ಭಯಂಕರ ಸಂದರ್ಭ ತಂದೊಡ್ಡಿತ್ತು.ರಾತ್ರಿಯೆಲ್ಲ ಹೆಣ್ಣು ಮಕ್ಕಳು ಪಕ್ಕದ ಹಳ್ಳಿಗಳಿಗೆ ಹೋಗಿ ನೀರು ತರುತ್ತಿದ್ದರು. ಈ ಸಮಸ್ಯೆ ನೀಗಿಸಲು ಸಾಕಷ್ಟು ಜನರನ್ನು ಸಂಪರ್ಕಿಸಿದೆ.ಅಣ್ಣಾ ಹಜಾರೆ ಅವರನ್ನು ಸಂಪರ್ಕಿಸಿದ್ದೆ.ಗ್ರಾಮದ ಹಳ್ಳಗಳನ್ನು ಸರಿಪಡಿಸಿ, ಕೆರೆ-ಕಟ್ಟೆಗಳಲ್ಲಿ ನೀರು ತುಂಬಲು ಸೌಲಭ್ಯ ಕಲ್ಪಿಸಿದೆ.ಅಂದು ಹಾಕಿದ 2.5 ಲಕ್ಷ ಗಿಡಗಳು ಇಂದು ನಳನಳಿಸುತ್ತಿವೆ ಎಂದು ವಿವರಿಸಿದರು.

ಹೆಚ್ಚು ಓದಿದವರು ವಿದೇಶಕ್ಕೆ ಪರಾರಿಯಾಗುತ್ತಾರೆ, ಶ್ರಮ ಸಂಸ್ಕøತಿ ಕಲಿಸುತ್ತಿಲ್ಲ. ಹೆಚ್ಚಿನ ಓದು, ಕಡಿಮೆ ಶ್ರಮ ಒಳ್ಳೆಯದಲ್ಲ. ಹೆಚ್ಚು ಓದಿದವರೆಲ್ಲ ವಿದೇಶಕ್ಕೆ ಪಲಾಯನವಾಗುತ್ತಿದ್ದು, ಭ್ರಷ್ಟಾಚಾರವೇ ನಮ್ಮ ಶಿಷ್ಟಾಚಾರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾಷಣಕ್ಕೆ ತೆರೆ: ಶಿವಾಜಿ ಛತ್ರೆಪ್ಪ ಕಾಗಣೀಕರ್ ಅವರ ಭಾಷಣ ಸುದೀರ್ಘವಾಗಿದ್ದರಿಂದ ಸಚಿವ ಸಂಪುಟ ಸಭೆಗೆ ತಡವಾಗುತ್ತದೆ ಎಂಬ ಕಾರಣಕ್ಕಾಗಿ ಸಚಿವ ಎಚ್.ಡಿ.ರೇವಣ್ಣ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಬಂದು ಅವರನ್ನು ಕರೆದೊಯ್ಯುವ ಪ್ರಯತ್ನ ನಡೆಸಿದರು.
ಈ ವೇಳೆ ಮುಖ್ಯಮಂತ್ರಿಗಳು ಭಾಷಣ ಮೊಟಕುಗೊಳಿಸುವಂತೆ ಅಧಿಕಾರಿಗಳ ಮುಖಾಂತರ ತಿಳಿಸಿದರೂ ಭಾಷಣ ನಿಲ್ಲಿಸದೆ ಶಿವಾಜಿ ಛತ್ರೆಪ್ಪ ಕಾಗಣೀಕರ್ ಅವರು ಮಾತು ಮುಂದುವರೆಸಿದ್ದರು.
ನಂತರ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹಸೀನ್ ಅವರು ಒತ್ತಡ ಹಾಕಿದಾಗ ಭಾಷಣಕ್ಕೆ ತೆರೆ ಬಿದ್ದಿತು.ನಂತರ ಮುಖ್ಯಮಂತ್ರಿ ಅಲ್ಲಿಂದ ತೆರಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ